ಚೆನ್ನೈ: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಲಿವುಡ್‌ನ ಖ್ಯಾತ ನಟ ಡೆಲ್ಲಿ ಗಣೇಶ್ ಶನಿವಾರ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ತಮಿಳು ನಟ ಗಣೇಶ್ ಅವರ ಸಾವನ್ನು ಪುತ್ರ ಮಹದೇವನ್ ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಮ್ಮ ತಂದೆ ಡೆಲ್ಲಿ ಗಣೇಶ್ ನವೆಂಬರ್ 9 ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ತಿಳಿಸಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರವು ಅವರ ಕೊನೆಯ ಚಿತ್ರವಾಗಿತ್ತು.
ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ನಟನೆ ಮಾಡಿದ್ದಾರೆ.
1976 ರಲ್ಲಿ ಬಾಲಚಂದರ್ ಅವರ ಪತ್ತಿನ ಪ್ರವೇಶಂ ಚಿತ್ರದ ಮೂಲಕ ವೃತ್ತಿಜೀವನ ಪ್ರಾರಂಭಿಸಿದರು. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಣೇಶ್ ಕೆಲಸ ಮಾಡಿದ್ದರು. ನಾಯಕನ್, ಮೈಕೆಲ್ ಮದನ ಕಾಮ ರಾಜನ್, ಸಿಂಧು ಭೈರವಿ, ಇರುವರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಭಾರತೀಯ ವಾಯು ಸೇನೆಯಲ್ಲಿ ದಶಕದ ಕಾಲ ಕೆಲಸ ಮಾಡಿದ್ದ ಡೆಲ್ಲಿ ಗಣೇಶ್ ಅವರು ಬಳಿಕ ಚಿತ್ರರಂಗದಲ್ಲಿ ಮಿಂಚಿದ್ದರು. ಡೆಲ್ಲಿ ಗಣೇಶ್ ಅವರ ಅಂತಿಮ ಕ್ರಿಯೆಯು ಸೋಮವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.