ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದಾಗಿ ನೂರಾರು ಜನರು ಪ್ರಾಣ, ಮನೆ ಮಠ ಕಳೆದುಕೊಂಡಿದ್ದಾರೆ. ಈ ಕಂಡು ಕೇಳರಿಯದ ದುರಂತಕ್ಕೆ ಇಡೀ ದೇಶವೇ ಮರುಗಿದೆ.
ಇದೀಗ ವಯನಾಡಿನ ಜನರ ಸಹಾಯಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಹಲವರು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷ ಲಕ್ಷ ಹಣ ದೇಣಿಗೆ ನೀಡಿದ್ದಾರೆ. ಆದರೆ ಈ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಹೆಸರಿರಲಿಲ್ಲ ಎನ್ನುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಆದರೆ ಮೋಹನ್ ಲಾಲ್ ದೇಣಿಗೆ ನೀಡಿ ಕೈ ತೊಳೆದುಕೊಂಡಿಲ್ಲ. ಸ್ವತಃ ತಾವೇ ವಯನಾಡಿನಲ್ಲಿ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಟ ಮೋಹನ್ ಲಾಲ್ ಭಾರತೀಯ ಸೇನೆಯ ಗಡಿ ಭದ್ರತಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಹೊಂದಿದ್ದಾರೆ.
ಇದೀಗ ಸೇನಾ ಸಮವಸ್ತ್ರದಲ್ಲೇ ಗುಡ್ಡ ಕುಸಿತವಾದ ಸ್ಥಳಕ್ಕೆ ಬಂದ ಮೋಹನಲ್ ಲಾಲ್ ಯೋಧರಿಂದ ಪರಿಹಾರ ಕಾರ್ಯದ ಮಾಹಿತಿ ಪಡೆದಿದ್ದಾರೆ. ಬಳಿಕ ಸೇನೆಯ ರಕ್ಷಣಾ ಕಾರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.