Publish Date: Fri, 08 Jan 2021 (10:40 IST)
Updated Date: Fri, 08 Jan 2021 (10:44 IST)
ಬೆಂಗಳೂರು: ನಟ ಅನಿರುದ್ಧ್ ಮನೆಗೆ ನಿನ್ನೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ದಿಡೀರ್ ಭೇಟಿ ನೀಡಿದ್ದು, ಈ ಭೇಟಿಯ ಹಿಂದಿನ ಕಾರಣವನ್ನು ಸ್ವತಃ ಅನಿರುದ್ಧ್ ಹೇಳಿಕೊಂಡಿದ್ದಾರೆ.
ಅನಿರುದ್ಧ್ ಇತ್ತೀಚೆಗೆ ಕಸ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆದು ಸ್ವಚ್ಛತೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಶಾಸಕಿ ಸೌಮ್ಯ ರೆಡ್ಡಿ ಅನಿರುದ್ಧ್ ಮನೆಗೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅನಿರುದ್ಧ್ ತಮ್ಮ ಪರಿಕಲ್ಪನೆಗಳ ಕುರಿತು ಶಾಸಕಿ ಜೊತೆ ಚರ್ಚೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಅನಿರುದ್ಧ್ ಗುಜರಾತ್ ಮಾದರಿಯಲ್ಲಿ ಕಾಲುವೆಗಳ ಮೇಲೆ ಸೌರ ಫಲಕವನ್ನು ಹಾಕುವ ಯೋಜನೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಈ ಯೋಜನೆ ಬಗ್ಗೆ ಹಾಗೂ ನಗರದಲ್ಲಿ ಕಸ ವಿಲೇವಾರಿಗೆ ತಮ್ಮ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಹೇಳಿದಂತೆ ಹಸಿ ಕಸ ನೀಡಿ ಹಣ ಪಡೆಯುವ ಆರ್ಯವರ್ಧನ್ ಯೋಜನೆ ಬಗ್ಗೆ ಶಾಸಕಿ ಜತೆ ಚರ್ಚೆ ನಡೆಸಿದ್ದಾರೆ. ಈ ಸಮಾಜಪರ ಕೆಲಸಗಳ ಬಗ್ಗೆ ತಮ್ಮ ಪರಿಕಲ್ಪನೆಗಳಿಗೆ ಶಾಸಕಿ ಸೌಮ್ಯ ರೆಡ್ಡಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಬೆಂಬಲ ನೀಡಿದ್ದಾರೆ ಎಂದು ಅನಿರುದ್ಧ್ ಹೇಳಿದ್ದಾರೆ.