ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಅನಿಮಲ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ತೆಲಂಗಾಣದ ಸಚಿವ ಮಲ್ಲ ರೆಡ್ಡಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.
ಅನಿಮಲ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ, ಮಹೇಶ್ ಬಾಬುರಂತಹ ಘಟಾನುಘಟಿಗಳು ಬಂದಿದ್ದರು. ಅವರ ಜೊತೆಗೆ ಸಚಿವ ಮಲ್ಲ ರೆಡ್ಡಿ ಕೂಡಾ ವೇದಿಕೆಗೆ ಬಂದು ಮಾತನಾಡಿದ್ದರು.
ಆದರೆ ಮಾತಿನ ನಡುವೆ ರಣಬೀರ್ ಕಪೂರ್ ಉದ್ದೇಶಿಸಿ ಸಚಿವರು ಮುಂದಿನ ಐದು ವರ್ಷಗಳಲ್ಲಿ ತೆಲುಗು ಜನ ಕೇವಲ ಹಾಲಿವುಡ್, ಬಾಲಿವುಡ್ ಮಾತ್ರವಲ್ಲ, ಇಡೀ ದೇಶವನ್ನೇ ಆಳಲಿದ್ದಾರೆ. ನೀವೂ ಸದ್ಯದಲ್ಲೇ ಹೈದರಾಬಾದ್ ಗೆ ಶಿಫ್ಟ್ ಆಗುತ್ತೀರಿ. ಯಾಕೆ ಕೇಳಿ? ಯಾಕೆಂದರೆ ಮುಂಬೈ ಹಳೆಯದಾಯಿತು. ಬೆಂಗಳೂರಲ್ಲಿ ಟ್ರಾಫಿಕ್ ಹೆಚ್ಚಾಗಿದೆ. ಹೈದರಾಬಾದ್ ಮಾತ್ರವೇ ದೇಶದಲ್ಲಿ ಚೆನ್ನಾಗಿರುವ ನಗರ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಮಲ್ಲ ರೆಡ್ಡಿ ವೇದಿಕೆಯಲ್ಲಿ ಹೀಗೆ ಹೇಳುತ್ತಿದ್ದರೆ ಕುಳಿತಿದ್ದ ರಣಬೀರ್ ಮುಖದಲ್ಲಿ ಇಲ್ಲದ ನಗು ತಂದುಕೊಂಡು ಕೂತಿದ್ದರು. ಸಚಿವರ ಈ ಹೇಳಿಕೆ ಅಲ್ಲಿದ್ದವರಿಗೆ ಕೊಂಚ ಇರಿಸು ಮುರಿಸು ಉಂಟುಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ರಣಬೀರ್ ತಾಳ್ಮೆಗೆ ಮೆಚ್ಚಲೇ ಬೇಕು ಎಂದಿದ್ದಾರೆ.