ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ರಾಜ್ಯ ಸರ್ಕಾರ ಎರಡು ದಿನ ಮದ್ಯ ನಿಷೇಧ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಬಳಿಕ ಅಭಿಮಾನಿಗಳು ಅತಿರೇಕದ ವರ್ತನೆ ತೋರಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಎರಡು ದಿನ ಮದ್ಯ ನಿಷೇಧ ಮಾಡಿತ್ತು. ಇದರ ಬಗ್ಗೆ ರಿತ್ವಿಕ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಬರೆದಿದ್ದ.
ನಿಷೇಧದ ನಡುವೆಯೂ ಮದ್ಯದ ಬಾಟಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ರಿತ್ವಿಕ್ ಬಾಟಲಿಯ ಚಿತ್ರ ಪೋಸ್ಟ್ ಮಾಡಿ ಪುನೀತ್ ಬಗ್ಗೆ ಅವಹೇಳಿಸಿದ್ದ. ಈ ಬಗ್ಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೊನೆಗೂ ಪೊಲೀಸರು ಕಿಡಿಗೇಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.