ಹೈದರಾಬಾದ್: ಪುಷ್ಪ 2 ತಾರೆ ಅಲ್ಲು ಅರ್ಜುನ್ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಈಗ ರಾಜಕೀಯ ಟ್ವಿಸ್ಟ್ ಸಿಕ್ಕಿದೆ. ಕಲ್ಲು ತೂರಾಟ ನಡೆಸಿದ ಆರೋಪಿಗಳಲ್ಲಿ ಪ್ರಮುಖ ಶ್ರೀನಿವಾಸ್ ಈ ಹಿಂದೆ ಸಿಎಂ ರೇವಂತ್ ರೆಡ್ಡಿ ಜೊತೆಗಿರುವ ಫೋಟೊವೊಂದು ಈಗ ವೈರಲ್ ಆಗಿದೆ.
ಪುಷ್ಪ 2 ರಿಲೀಸ್ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಥಿಯೇಟರ್ ವಿಸಿಟ್ ಮಾಡಿದ್ದಾಗ ಓರ್ವ ಮಹಿಳೆ ಸಾವನ್ನಪ್ಪಿದ್ದಲ್ಲದೆ ಆತನ ಪುತ್ರನಿಗೆ ಗಂಭೀರ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿ ಬಿಡುಗಡೆಯಾಗಿತ್ತು. ಬಿಡುಗಡೆ ಬಳಿಕ ಹಲವು ಸಿನಿ ತಾರೆಯರು ಅಲ್ಲು ಮನೆಗೆ ಭೇಟಿ ನೀಡಿದ್ದನ್ನು ಸಿಎಂ ರೇವಂತ್ ರೆಡ್ಡಿ ಕಟುವಾಗಿ ಟೀಕಿಸಿದ್ದರು.
ಅಲ್ಲು ಅರ್ಜುನ್ ಮನೆಗೆ ಪಾರ್ಟಿ ಮಾಡಲು ಹೋಗಿದ್ದ ಯಾವುದೇ ತಾರೆಯರೂ ಗಾಯಗೊಂಡ ಹುಡುಗನ ವಿಚಾರಿಸಲು ಆಸ್ಪತ್ರೆಗೆ ಹೋಗಲಿಲ್ಲ ಎಂದು ರೇವಂತ್ ರೆಡ್ಡಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಪತ್ರಿಕಾಗೋಷ್ಠಿ ನಡೆಸಿ ಸಿಎಂಗೆ ಟಾಂಗ್ ಕೊಟ್ಟಿದ್ದರು.
ಈ ವಿಚಾರ ಕಾವೇರುತ್ತಿದ್ದಂತೇ ನಿನ್ನೆ ಅಲ್ಲು ನಿವಾಸಕ್ಕೆ ಕೆಲವು ಕಿಡಿಗೇಡಿಗಳ ಗುಂಪು ಕಲ್ಲು ತೂರಾಟ ನಡೆಸಿದ್ದರು. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಆರೋಪಿಗಳಲ್ಲಿ ಒಬ್ಬಾತ ಶ್ರಿನಿವಾಸ್ ಈ ಹಿಂದೆ ರೇವಂತ್ ರೆಡ್ಡಿ ಜೊತೆಗೆ ತೆಗೆಸಿಕೊಂಡಿದ್ದ ಫೋಟೋವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಈ ಗಲಾಟೆಯನ್ನು ರೇವಂತ್ ರೆಡ್ಡಿಯೇ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅಲ್ಲು ಫ್ಯಾನ್ಸ್ ಸಿಎಂ ರೇವಂತ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.