Publish Date: Mon, 12 Aug 2024 (12:35 IST)
Updated Date: Mon, 12 Aug 2024 (12:38 IST)
ಕೋಲ್ಕೊತ್ತಾ: ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ರೇಪ್ ಮತ್ತು ಮರ್ಡರ್ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದು, ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಅಂಶಗಳು ಹೊರಬಿದ್ದಿವೆ.
ಕೋಲ್ಕೊತ್ತಾದ ಆರ್ ಜಿಕರ್ ಹಾಸ್ಪಿಟಲ್ ನಲ್ಲಿ 31 ವರ್ಷದ ಡ್ಯೂಟಿ ಡಾಕ್ಟರ್ ಮೇಲೆ ಭೀಕರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ವೈದ್ಯ ಲೋಕವೇ ಪ್ರತಿಭಟನೆ ನಡೆಸುತ್ತಿದೆ. ಇದೀಗ ಆಕೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು, ಅದರಲ್ಲಿರುವ ಅಂಶಗಳು ಭಯಾನಕವಾಗಿದೆ.
ರಾತ್ರಿ ಡ್ಯೂಟಿಗೆ ಬಂದಿದ್ದ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಕೆಗೆ ಇನ್ನಿಲ್ಲದಂತೆ ಹಿಂಸೆ ನೀಡಲಾಗಿದೆ. ಆಕೆಯ ಮೃತದೇಹವನ್ನು ಮೊದಲು ನೋಡಿದ್ದು ಎರಡನೇ ವರ್ಷ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದಳು. ಆಕೆ ನೋಡುವಾಗ ಮೃತದೇಹ ಅರೆನಗ್ನ ಸ್ಥಿತಿಯಲ್ಲಿತ್ತು. ಆಕೆ ಧರಿಸಿದ್ದ ಜೀನ್ಸ್ ಪ್ಯಾಂಟ್, ಒಳ ಉಡುಪುಗಳು ಪಕ್ಕದಲ್ಲಿ ಬಿದ್ದಿತ್ತು.
ವೈದ್ಯೆಯ ಕಣ್ಣು, ಬಾಯಿ ಮತ್ತು ಖಾಸಗಿ ಅಂಗಾಂಗದಲ್ಲಿ ರಕ್ತ ಸೋರಿಕೆಯಾಗುತ್ತಿತ್ತು. ಅವಳ ತುಟಿ, ಹೊಟ್ಟೆ ಮತ್ತು ತೊಡೆಯಲ್ಲಿ ಗಾಯದ ಗುರುತುಗಳಿವೆ. ಈ ಎಲ್ಲಾಅಂಶಗಳನ್ನೂ ಈಗ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ಜೋರಾಗಿದ್ದು, ಪ್ರಿನ್ಸಿಪಾಲ್ ರಾಜೀನಾಮೆ ನೀಡಿದ್ದಾರೆ.
ಪೊಲೀಸ್ ವರದಿಯ ಪ್ರಕಾರ ಬೆಳಗಿನ ಜಾವ 3 ರಿಂದ 6 ಗಂಟೆಯೊಳಗಾಗಿ ಕೃತ್ಯ ನಡೆದಿದೆ. ಕರ್ತವ್ಯದಲ್ಲಿದ್ದ ವೈದ್ಯೆ ಊಟ ಮಾಡಿದ ಬಳಿಕ ಕೆಲವು ಹೊತ್ತು ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್ ಗೆ ಹೋಗಿದ್ದಾಗ ಆರೋಪಿ ಕೃತ್ಯವೆಸಗಿದ್ದಾನೆ. ಕೃತ್ಯದ ಬಳಿಕ ಸದ್ದಿಲ್ಲದೇ ತನ್ನ ಮನೆಗೆ ಹೋಗಿದ್ದ ಆರೋಪಿ ಕೆಲವು ಕಾಲ ಮಲಗಿ ನಿದ್ರೆ ಮಾಡಿದ್ದಾನೆ. ಬಳಿಕ ತನ್ನ ಬಟ್ಟೆಗಳನ್ನೆಲ್ಲಾ ತೊಳೆದು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಆದರೆ ಆತನ ಶೂಗಳಲ್ಲಿ ರಕ್ತದ ಕಲೆಯಿತ್ತು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವೈದ್ಯಕೀಯ ವರದಿಗಳ ಪ್ರಕಾರ ಆರೋಪಿ ವೈದ್ಯೆಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರವೆಸಗಿರಬಹುದು ಎನ್ನಲಾಗಿದೆ. ಆರೋಪಿ ಆಸ್ಪತ್ರೆಯ ಸಿಬ್ಬಂದಿಯಲ್ಲ. ಆದರೆ ಹೆಚ್ಚಾಗಿ ಇಲ್ಲಿ ಓಡಾಡುತ್ತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.