ಬೆಂಗಳೂರು: ಇತ್ತೀಚೆಗೆ ಬಹುತೇಕ ಸ್ಟಾರ್ ನಟರು ಬರ್ತ್ ಡೇಗೆ ಒಂದೆರಡು ದಿನ ಇರುವಾಗ ಸೋಷಿಯಲ್ ಮೀಡಿಯಾದಲ್ಲಿ ಮನೆ ಬಳಿ ಬರಬೇಡಿ ಎಂದು ಮೆಸೇಜ್ ಹಾಕಿಬಿಡುತ್ತಾರೆ. ಆದರೆ ಕಿಚ್ಚ ಸುದೀಪ್ ಮಾತ್ರ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ.
ಸೆಪ್ಟೆಂಬರ್ 2 ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇ. ಈಗಾಗಲೇ ಅಭಿಮಾನಿಗಳು ಹುಟ್ಟುಹಬ್ಬ ದಿನ ನಿಮ್ಮನ್ನು ಭೇಟಿ ಮಾಡಬೇಕು ಎಂದು ಮೆಸೇಜ್ ಮಾಡಿದ್ದರು. ಇದಕ್ಕೀಗ ಕಿಚ್ಚ ಸಕಾರಾತ್ಮಾಕವಾಗಿಯೇ ಸ್ಪಂದಿಸಿದ್ದಾರೆ.
ಸೆಪ್ಟೆಂಬರ್ 1 ರ ರಾತ್ರಿಯೇ ಅಭಿಮಾನಿಗಳಿಗೆ ಸಿಗೋಣ್ವಾ ಎಂದು ಕೇಳಿದ್ದಾರೆ. ನೀವು ನನ್ನನ್ನು ಭೇಟಿ ಮಾಡಲು ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚು ನಾನು ಕಾಯುವೆ. ಆ ದಿನ ನೀವು ಪಡುವ ಸಂಭ್ರಮ ನೋಡಿದರೆ ನನಗೆ ಮರುಹುಟ್ಟು ಬಂದಂತಾಗುತ್ತದೆ. ನಿಮ್ಮೆದುರು ವಿನೀತನಾಗಿ ನಿಲ್ಲುವುದಕ್ಕಿಂತ ಖುಷಿ ಇನ್ನೇನಿದೆ? ಈ ಸಲ ಅಮ್ಮನಿಲ್ಲದ ಹುಟ್ಟುಹಬ್ಬದ ಸಂಭ್ರಮ ನನಗೆ. ಆ ಬೇಸರವಿದೆ. ಆದರೆ ನಿಮ್ಮನ್ನು ನಿರಾಸೆಗೊಳಿಸಲು ಇಷ್ಟವಿಲ್ಲ. ಹೀಗಾಗಿ ಸೆಪ್ಟೆಂಬರ್ 1 ರ ರಾತ್ರಿ ಒಂದು ಕಡೆ ಸಿಗೋಣ. ಆದರೆ ಸೆಪ್ಟೆಂಬರ್ 2 ರಂದು ಮನೆ ಬಳಿ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ಆದರೆ ನನಗಾಗಿ ನೀವು ಬಂದು ನಿರಾಸೆಯಾಗೋದು ನನಗಿಷ್ಟವಿಲ್ಲ. ಅಮ್ಮನಿಲ್ಲದ ವರ್ಷವಾಗಿರುವುದರಿಂದ ಮನೆ ಬಳಿ ಸ್ವಲ್ಪ ಶಾಂತಿಯಿರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಅವರ ಈ ಸುದೀರ್ಘ ಸಂದೇಶ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಬರ್ತ್ ಡೇ ದಿನ ಸಿಗದಿದ್ದರೂ ರಾತ್ರಿಯೇ ಸಿಗುತ್ತಾರಲ್ಲಾ ಎಂಬ ಖುಷಿ ಅಭಿಮಾನಿಗಳಲ್ಲಿದೆ. ಆದರೆ ಎಲ್ಲಿ ಮೀಟ್ ಆಗುತ್ತೇವೆ ಎನ್ನುವುದನ್ನು ಅವರು ಇನ್ನೂ ಹೇಳಬೇಕಿದೆಯಷ್ಟೇ.