ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ಪೈಲ್ವಾನ್ ಸಿನಿಮಾ ಕುರಿತು ನೆಗೆಟಿವ್ ಕಾಮೆಂಟ್ ಮಾಡುತ್ತಿರುವವರಿಗೆ, ಅದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಮಾಡುತ್ತಿರುವವರ ಬಗ್ಗೆ ಕೊನೆಗೂ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಖಡಕ್ ಸಂದೇಶ ಕೊಟ್ಟಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ:
ಎಲ್ಲರಿಗೂ ನಾನು ಮನವಿ ಮಾಡುತ್ತೇನೆ. ಎಲ್ಲರೂ ಅವರವರವ ಕೆಲಸದಲ್ಲಿ ತೊಡಗಿಸಿಕೊಂಡರೆ ಅವರಿಗೇ ಒಳ್ಳೆಯದು. ಇಂತಹ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುವ ಬದಲು ಸುಮ್ಮನಿರುವುದೇ ಒಳ್ಳೆಯದು.ಇದರಿಂದ ನಾವು ಯಾರೂ ಚಿಕ್ಕವರಾಗಲ್ಲ. ಸತ್ಯ ಯಾವತ್ತೂ ಶಾಶ್ವತವಾಗಿರುತ್ತದೆ.
ಇಲ್ಲಿ ಯಾರೂ ಪೈರಸಿ ಬಗ್ಗೆ ಒಬ್ಬ ನಟನನ್ನು ದೂರಲಿಲ್ಲ. ನಾನು ಅಥವಾ ಚಿತ್ರತಂಡ ಯಾವುದೇ ನಟನ ಹೆಸರನ್ನೂ ಹೇಳಿಲ್ಲ. ಹೌದು, ಯಾರೋ ಈ ಕೃತ್ಯವೆಸಗಿದ್ದಾರೆ. ಅವರ ಹೆಸರನ್ನು ಸೈಬರ್ ಪೊಲೀಸರಿಗೆ ನೀಡಲಾಗಿದೆ, ಅವರು ತನಿಖೆ ನಡೆಸಿ ಸತ್ಯಾಂಶ ಹೊರಬರುತ್ತದೆ. ಹೀಗಾಗಿ ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ವಿರಾಮವಿಡೋಣ. ಕೆಲವರು ನನ್ನ ಹೆಸರ ಮೂಲಕ ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದಾರೆ. ಅದು ನಿಮಗೆ ನೋವು ಕೊಡುತ್ತದೆ ಎಂದು ನನಗೆ ಗೊತ್ತು. ಆದರೆ ನಾನು ಇದಕ್ಕೆಲ್ಲಾ ಜಗ್ಗುವನಲ್ಲ ಎಂಬುದು ನೆನಪಿರಲಿ.
ನನ್ನ ನಿರ್ಮಾಪಕರನ್ನು ಕಾಪಾಡುವುದು ನನ್ನ ಜವಾಬ್ಧಾರಿ. ನನ್ನ ಜೀವನವನ್ನು ಉದ್ಧಾರ ಮಾಡಲು ಯಾರನ್ನೂ ತುಳಿದು ಬದುಕುವ ಸ್ಥಿತಿ ನನಗಿಲ್ಲ. ಚಿತ್ರರಂಗದ ನನ್ನ ಸ್ನೇಹಿತರು, ಅಭಿಮಾನಿಗಳು ನನ್ನ ಬಗ್ಗೆ ತೋರಿರುವ ಪ್ರೀತಿ, ಸ್ನೇಹವೇ ನನಗೆ ಸಾಕು. ಇದಕ್ಕಿಂತ ದೊಡ್ಡದು ಬೇರೇನಾದರೂ ಇದೆಯೇ?
ಹೀರೋಯಿಸಂ ತೋರಿಸುವ ಸಾಲು ಬರೆಯೋದು, ಬೆದರಿಕೆ ಹಾಕೋದು ನನ್ನ ಜಾಯಮಾನವಲ್ಲ. ಹೌದು, ಒಂದು ಸಮಯದಲ್ಲಿ ನಾನು ಒಬ್ಬ ನಟನ ಬಗ್ಗೆ ಟ್ವೀಟ್ ಮಾಡಬೇಕಾಗಿ ಬಂತು. ಅದೂ ನಾನಾಗಿಯೇ ಮಾಡಿಕೊಂಡಿದ್ದಲ್ಲ. ನಂತರ ನನಗೆ ಇದೆಲ್ಲಾ ಬೇಕಾಗಿರಲಿಲ್ಲ ಎನಿಸಿತು. ನನ್ನ ಜೀವನದಲ್ಲಿ ಕೆಲವರೊಂದಿಗೆ ವಾದವಿತ್ತು. ಅದೆಲ್ಲಾ ಒಂದು ಭಾಗ ಅಲ್ಲವೇ? ಇದನ್ನು ಅರ್ಥ ಮಾಡಿಕೊಂಡು ಮುಂದುವರಿಯುವ ಮನುಷ್ಯ ಜಗತ್ತನ್ನೇ ಗೆಲ್ಲುತ್ತಾನೆ. ಅದನ್ನೇ ನಾನು ಮಾಡಿದ್ದೇನೆ. ಅಗತ್ಯ ಬಂದಾಗ ಕ್ಷಮೆ ಕೇಳಲೂ ನಾನು ಹಿಂಜರಿಯಲಿಲ್ಲ. ಇದನ್ನೂ ನಾನು ಬಹಿರಂಗವಾಗಿಯೇ ಮಾಡಿದ್ದೇನೆ.
ನನ್ನ ಕೆಲಸದ ಮೂಲಕವೇ ನಾನು ಜನರನ್ನು ಗೆಲ್ಲಲು ಇಷ್ಟಪಡುತ್ತೇನೆ. ಚಿತ್ರರಂಗದಲ್ಲಿ ಕೆಲವರ ಸ್ನೇಹವನ್ನಾದರೂ ನನಗೆ ಸಂಪಾದಿಸಲು ಸಾಧ‍್ಯವಾಗಿದೆ ಎನ್ನುವುದಕ್ಕೆ ಸಂತೋ಼ಷವಿದೆ. ನನ್ನ ಮತ್ತು ನನ್ನ ಕುಟುಂಬದ ಜತೆಗೆ ನಿಂತ ಎಲ್ಲರ ಪ್ರೀತಿಯ ಅರಿವು ನನಗಿದೆ. ನಮಗೆಲ್ಲಾ ಜೀವನದಲ್ಲಿ ಕೆಲವೇ ಸಮಯವಿರುವುದು. ಹಾಗಾಗಿ ಮುನ್ನಡೆಯೋಣ.
ಗಮನಿಸಿ: ಇಡೀ ಜಗತ್ತನ್ನು ಆಕ್ರಮಿಸಿದ ಅಲೆಕ್ಸಾಂಡರ್ ಕೊನೆಗೆ ಖಾಲಿ ಕೈಯಲ್ಲಿ ತೆರಳಿದ. ನಮಗೆ ತೆಗೆದುಕೊಂಡಲು ಹೋಗಲು ಸಾಧ್ಯವಾಗುವುದು ಒಳ್ಳೆಯ ನೆನಪುಗಳನ್ನು ಮಾತ್ರ. ಎಲ್ಲರನ್ನೂ ಜೀವಂತವಾಗಿಡುವುದು ನೆನಪುಗಳು ಮಾತ್ರ..
ಪ್ರೀತಿಯಿರಲಿ,
ಕಿಚ್ಚ ಸುದೀಪ