ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು ಭಾರೀ ವೈರಲ್ ಆಗಿತ್ತು.
ಕಿಚ್ಚ ತಮ್ಮ ಒಂದು ಕಾಲದ ಗೆಳೆಯನಾಗಿದ್ದ ದರ್ಶನ್ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣದ ಬಗ್ಗೆ ಸುದೀರ್ಘ ಪೋಸ್ಟ್ ಮೂಲಕ ಘಟನೆ ಖಂಡಿಸಿದ್ದರು. ಇಬ್ಬರ ನಡುವೆ ಸ್ಯಾಂಡಲ್ ವುಡ್ ನಲ್ಲಿ ಶೀತಲ ಸಮರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗಿದ್ದರೂ ಸುದೀಪ್ ವೈಮನಸ್ಯ ಮರೆತು ದರ್ಶನ್ ಯಾವತ್ತಿಗೂ ನನ್ನ ಸ್ನೇಹಿತ ಎಂದಿದ್ದರು. ಅದರಂತೆ ಆಗಾಗ ನಡೆದುಕೊಳ್ಳುತ್ತಾರೆ ಕೂಡಾ.
ಹೀಗಾಗಿ ಕಿಚ್ಚನ ಅಭಿಮಾನಿಯೊಬ್ಬರು ನಾಯಿ ಬಾಲ ಯಾವತ್ತಿದ್ದರೂ ಡೊಂಕೇ. ಚಪ್ಪಾಳೆ ಯಾವತ್ತಿಗೂ ಎರಡು ಕೈಯಿಂದ ಆಗಬೇಕು. ಬಾಸ್ ನಾವು ನಿಮಗೆ ಸಲಹೆ ನೀಡುವಷ್ಟು ದೊಡ್ಡವರಲ್ಲ. ಆದರೆ ನೀವು ದಯವಿಟ್ಟು ನಿಮ್ಮ ಅಭಿಮಾನಿಗಳ ಬಗ್ಗೆ ಮಾತ್ರ ಯೋಚಿಸಿ. ನಿಮಗೆ ಕಷ್ಟ ಬಂದಾಗ ನಿಮ್ಮ ಅಭಿಮಾನಿಗಳ ಹೊರತಾಗಿ ಸ್ಯಾಂಡಲ್ ವುಡ್ ನ ಯಾವ ಸ್ಟಾರ್ ಗಳೂ ನಿಲ್ಲುವುದಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ನಾನು ನನ್ನ ಅಭಿಮಾನಿಗಳ ಬಗ್ಗೆ ಯೋಚನೆ ಮಾಡಬೇಕಾದ್ದು ಏನೂ ಇಲ್ಲ ಗೆಳೆಯಾ.. ಯಾಕೆಂದರೆ ನಾನು ಅವರಿಂದ ತುಂಬಾ ದೂರ ಇಲ್ಲ. ನಾನು ಅವರ ಜೊತೆಗೇ ಬದುಕುತ್ತಿದ್ದೇನೆ. ಅವರಿಗಾಗಿಯೇ ಬದುಕುತ್ತಿದ್ದೇನೆ. ಅವರು ನನ್ನ ಜೀವಂತವಾಗಿಟ್ಟಿದ್ದಾರೆ ಎಂದಿದ್ದಾರೆ.