ಬೆಂಗಳೂರು: ಥಿಯೇಟರ್ ಗಳಲ್ಲಿ ಮತ್ತೆ ಶೇ.50 ಮಂದಿ ಹಾಜರಾತಿಗೆ ಅವಕಾಶ ಕೊಟ್ಟ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯವನ್ನು ಟ್ವಿಟರ್ ಮೂಲಕ ಹೊರಹಾಕಿದ್ದರು. ಆದರೆ ಕಿಚ್ಚನ ಮಾತು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ನಿರ್ಧಾರದ ಬಗ್ಗೆ ಯುವರತ್ನ ಚಿತ್ರತಂಡ ಈಗಾಗಲೇ ಬೇಸರ ಹೊರಹಾಕಿತ್ತು. ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಸರ್ಕಾರದ ನಿರ್ಧಾರವನ್ನು ಸಂಪೂರ್ಣ ತಪ್ಪು ಎಂದು ಹೇಳಲೂ ಆಗದು ಎಂದಿದ್ದರು.
ಮತ್ತೆ ಶೇ.50 ಪ್ರೇಕ್ಷಕರಿಗೆ ಅವಕಾಶ ನೀಡುವ ಸರ್ಕಾರದ ನಿರ್ಧಾರ ಚಿತ್ರರಂಗದ ಮಟ್ಟಿಗೆ ಶಾಕಿಂಗ್. ಆದರೆ ಇದರ ಹಿಂದಿನ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ಧಾರವನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಈ ಪರಿಸ್ಥಿತಿಯಂದ ಹೊರಬಂದು ವಿಜಯಿಯಾಗಲು ಯುವರತ್ನ ಚಿತ್ರತಂಡಕ್ಕೆ ಹಾರೈಸುವೆ ಎಂದು ಸುದೀಪ್ ಹೇಳಿದ್ದರು.
ಇದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯುವರತ್ನ ತಂಡದ ಪರ ನಿಲ್ಲದೇ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವುದಕ್ಕೆ ಕಿಚ್ಚನ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಇತ್ತೀಚೆಗೆ ನೀವು ಸಿಎಂ ಭೇಟಿಯಾಗಿದ್ದಕ್ಕೆ ಸರಿಯಾಗಿಯೇ ಕೃತಜ್ಞತೆ ಸಲ್ಲಿಸಿದಿರಿ ಎಂದು ಪುನೀತ್ ಅಭಿಮಾನಿಗಳು ವ್ಯಂಗ್ಯ ಮಾಡಿದ್ದಾರೆ.