ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋಗೆ ಒಂದು ಖ್ಯಾತಿ ತಂದುಕೊಟ್ಟಿದ್ದು ಕಿಚ್ಚ ಸುದೀಪ್. ಬಿಗ್ ಬಾಸ್ ಕನ್ನಡ 11 ಅವರ ಕೊನೆಯ ಬಿಗ್ ಬಾಸ್ ಶೋ. ನಿನ್ನೆ ಕೊನೆಯ ಕಿಚ್ಚನ ಪಂಚಾಯ್ತಿ ನಡೆಸಿ ಸುದೀಪ್ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಇನ್ನು ಒಂದೇ ವಾರ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಫೈನಲ್ ಶೋನಲ್ಲಿ ಮಾತ್ರ. ವಾರದ ಕತೆ ಕಿಚ್ಚನ ಜೊತೆ ಎನ್ನುವ ವಾರಂತ್ಯದ ಶೋ ನಿನ್ನೆಗೇ ಸಮಾಪ್ತಿಯಾಗಿದೆ. ಹೀಗಾಗಿ ಅವರು ಕೊಂಚ ಭಾವುಕರಾದರು.
ಕಳೆದ 11 ಸೀಸನ್ ಗಳನ್ನು ಕಿಚ್ಚ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಯಾವುದೇ ಭಾಷೆಗಳಲ್ಲೂ ಇಷ್ಟು ವರ್ಷ ಒಬ್ಬರೇ ನಿರೂಪಕರಿದ್ದ ಉದಾಹರಣೆಯೇ ಇಲ್ಲ. ಆ ಮಟ್ಟಿಗೆ ಸುದೀಪ್ ದಾಖಲೆ ಬರೆದಿದ್ದಾರೆ.
ಕೊನೆಯ ಕಿಚ್ಚನ ಪಂಚಾಯ್ತಿ ನಡೆಸಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಕಿಚ್ಚ ಸುದೀಪ್ ಬಿಗ್ ಬಾಸ್ ಶೋವನ್ನು ಕಳೆದ 11 ಸೀಸನ್ ಗಳಿಂದ ಎಂಜಾಯ್ ಮಾಡುತ್ತಾ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ಫೈನಲ್ ಶೋ ನನ್ನ ಕೊನೆಯ ಎಪಿಸೋಡ್. ನಿಮ್ಮೆಲ್ಲರನ್ನು ಖುಷಿಪಡಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ. ಇದು ಮರೆಯಲಾಗದ ಪ್ರಯಾಣ. ನನಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಾಗಿರುವುದಕ್ಕೆ ಸಂತೋಷವಿದೆ. ಅವಕಾಶ ಕೊಟ್ಟ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳು. ಎಲ್ಲರಿಗೂ ನನ್ನ ಪ್ರೀತಿ, ಗೌರವ ಎಂದು ಬರೆದುಕೊಂಡಿದ್ದಾರೆ. ಅವರ ಈ ಸಂದೇಶಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ನೀವಿಲ್ಲದ ಬಿಗ್ ಬಾಸ್ ನೆನೆಸಿಕೊಳ್ಳಲೂ ಅಸಾಧ್ಯ ಎಂದಿದ್ದಾರೆ.