Publish Date: Tue, 04 Apr 2023 (09:20 IST)
Updated Date: Tue, 04 Apr 2023 (09:44 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ಸಮಯದ ಹಿಂದೆ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಎನ್ನುವ ಧಾರವಾಹಿಯಿಂದ ಮನೆ ಮಾತಾಗಿದ್ದ ಇಂಚರಾ ಅಲಿಯಾಸ್ ಕೌಸ್ತುಭ ಮಣಿಗೆ ಈಗ ಜಾಕ್ ಪಾಟ್ ಹೊಡೆದಿದೆ.
ಕಿರುತೆರೆಯಿಂದ ಹಿರಿತೆರೆಗೆ ನಟಿಮಣಿಯರು ಬರುವುದು ಹೊಸದೇನಲ್ಲ. ರಾಧಿಕಾ ಪಂಡಿತ್ ರಂತಹ ದಿಗ್ಗಜ ನಟಿಯರೇ ಆ ಸಾಲಿನಲ್ಲಿದ್ದಾರೆ. ಇದೀಗ ಕೌಸ್ತುಭ ಕೂಡಾ ಕಿರುತೆರೆಯ ಜನಪ್ರಿಯತೆಯಿಂದ ಹಿರಿತೆರೆಗೆ ಕಾಲಿಡುತ್ತಿದ್ದಾರೆ.
ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಅರ್ಜುನ್ ಜನ್ಯಾ ನಿರ್ದೇಶನದ ಮೊದಲ ಸಿನಿಮಾ 45 ಚಿತ್ರಕ್ಕೆ ಕೌಸ್ತುಭ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೌಸ್ತುಭಗೆ ಇದು ಬೆಳ್ಳಿತೆರೆಯಲ್ಲಿ ಎರಡನೇ ಸಿನಿಮಾ. ಇದಕ್ಕೆ ಮೊದಲು ರಾಮಚಾರಿ 2.0 ಎನ್ನುವ ಸಿನಿಮಾ ಮಾಡಿದ್ದಾರೆ. ಆದರೆ ಈಗಂತೂ ಘಟಾನುಘಟಿಗಳ ಜೊತೆ ಅಭಿನಯಿಸುವ ಅದೃಷ್ಟ ಖುಲಾಯಿಸಿದೆ.
ಧಾರವಾಹಿಯಲ್ಲಿದ್ದಾಗ ನಟನೆಯಿಂದ ಗುರುತಿಸಿಕೊಂಡಿದ್ದ ಕೌಸ್ತುಭ ಈಗ ಬೆಳ್ಳಿ ತೆರೆಯಲ್ಲಿ ದೊಡ್ಡ ಅವಕಾಶವನ್ನೇ ಪಡೆದಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಮುಖ್ಯ ಎಂದಿದ್ದಾರೆ ಕೌಸ್ತುಭ.