Publish Date: Thu, 29 Aug 2024 (11:38 IST)
Updated Date: Thu, 29 Aug 2024 (11:44 IST)
ಬೆಂಗಳೂರು: ಕನ್ನಡತಿ ಧಾರವಾಹಿ ಮೂಲಕ ಕನ್ನಡಿಗರ ಮನಗೆದ್ದ ನಟಿ, ಬರಹಗಾರ್ತಿ ರಂಜನಿ ರಾಘವನ್ ಸದ್ಯದಲ್ಲೇ ಹಸೆಮಣೆಯೇರಲಿದ್ದಾರೆ. ಇಂದು ತಮ್ಮ ಪ್ರೀತಿಯ ಹುಡುಗನನ್ನು ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದಾರೆ.
ಪುಟ್ಟಗೌರಿ ಧಾರವಾಹಿಯಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ರಂಜನಿ ರಾಘವನ್ ಬಳಿಕ ಕನ್ನಡತಿ ಧಾರವಾಹಿ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡರು. ಇದರ ನಡುವೆ ಅವರು ಬರೆದ ಎರಡು ಪುಸ್ತಕಗಳೂ ಬಿಡುಗಡೆಯಾದವು. ಆ ಮೂಲಕ ತಾವೊಬ್ಬ ಉತ್ತಮ ಬರಹಗಾರ್ತಿ ಎಂದು ನಿರೂಪಿಸಿದರು.
ಅಪ್ಪಟ ಕನ್ನಡತಿಯಾಗಿ ಕನ್ನಡಿಗರ ಮನ ಗೆದ್ದ ಸರಳ ಸುಂದರಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಸ್ನೇಹಿತ, ಸೈಕ್ಲಿಸ್ಟ್ ಸಾಗರ್ ಭಾರಧ್ವಾಜ್ ಎಂಬವರನ್ನು ರಂಜನಿ ಮದುವೆಯಾಗಲಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ರಂಜಿನಿ ಲೈಫ್ ಪಾರ್ಟನರ್ ಎಂದು ಪರಿಚಯಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಂಜನಿ ತಾವು ಮದುವೆಯಾಗು ಹುಡುಗ ತಮ್ಮ ಸ್ನೇಹಿತನೇ ಆಗಿದ್ದರೆ ಉತ್ತಮ ಎಂದು ಬಯಸುವುದಾಗಿ ಹೇಳಿದ್ದರು. ಆಗಲೇ ಎಲ್ಲರಿಗೂ ಯಾಕೋ ಇವರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಂತಿದೆ ಎಂದು ಅನುಮಾನ ಮೂಡಿತ್ತು. ಇಂದು ಸ್ವತಃ ತಾವೇ ತಮ್ಮ ಹುಡುಗನನ್ನು ಪರಿಚಯಿಸಿದ್ದಾರೆ. ಇಬ್ಬರಿಗೂ ಸಾಕಷ್ಟು ಜನ ಅಭಿನಂದನೆ ಸಲ್ಲಿಸುತ್ತಿದ್ದಾರೆ.