ಬೆಂಗಳೂರು: ಥಗ್ ಲೈಫ್ ಸಿನಿಮಾಗೆ ಕರ್ನಾಟಕದಲ್ಲಿ ನಿಷೇಧದ ಭೀತಿ ಬೆನ್ನಲ್ಲೇ ನಟ ಕಮಲ್ ಹಾಸನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಕನ್ನಡಿಗರು ಈಗ ಕೋರ್ಟ್ ನೆನಪಾಯ್ತಾ ಎಂದು ಟ್ರೋಲ್ ಮಾಡಿದ್ದಾರೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿದ್ದ ನಟ ಕಮಲ್ ಹಾಸನ್ ಗೆ ಈಗ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾಗೆ ನಿಷೇಧದ ಭೀತಿ ಎದುರಾಗಿದೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ಕ್ಷಮೆ ಕೇಳದೇ ಇದ್ದರೆ ಚಿತ್ರಕ್ಕೆ ನಿಷೇಧ ಹೇರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಡುವು ನೀಡಿದೆ.
ಇದರ ಬೆನ್ನಲ್ಲೇ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದಿರುವ ಕಮಲ್ ಹಾಸನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿನಿಮಾ ಬಿಡುಗಡೆಗೂ ಕಮಲ್ ಹಾಸನ್ ನೀಡಿರುವ ಹೇಳಿಕೆಗೂ ಯಾವುದೇ ಸಂಬಂಧವೂ ಇಲ್ಲ ಎಂದು ಥಗ್ ಲೈಫ್ ನಿರ್ಮಾಣ ಸಂಸ್ಥೆ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ.
ಅದರ ವಿಚಾರಣೆ ಇಂದು ನಡೆಯಲಿದೆ. ಇನ್ನು, ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸರ್ಕಾರದ ಬೆಂಬಲವಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿರುವುದು ವಾಣಿಜ್ಯ ಮಂಡಳಿಗೆ ಬಲ ಬಂದಂತಾಗಿದೆ.