ಚೆನ್ನೈ: ಮೊನ್ನೆಯಷ್ಟೇ ಕಾಲಿವುಡ್ ನಟ ಜಯಂ ರವಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಆದರೆ ಇದಕ್ಕೆ ಈಗ ಪತ್ನಿ ಆರತಿ ತಕರಾರು ತೆಗೆದಿದ್ದಾರೆ. ಅಷ್ಟಕ್ಕೂ ಅವರ ಆರೋಪವೇನು ಗೊತ್ತಾ?
ಇದು ಪರಸ್ಪರ ಒಪ್ಪಿಗೆಯಿಂದ ಘೋಷಿಸಿರುವ ವಿಚ್ಛೇದನವಲ್ಲ. ನನ್ನ ಜೊತೆ ಚರ್ಚಿಸದೇ ಪತಿ ಜಯಂ ರವಿ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡಲು ಸಮಯ ಬೇಕು ಎಂದು ಆರತಿ ಬೇಸರ ಹೊರಹಾಕಿದ್ದಾರೆ. ಆದರೆ ಜಯಂ ರವಿ ಕೂತು ಬಗೆಹರಿಸಲು ಸಾಧ್ಯವೇ ಇಲ್ಲ ಎಂದು ಅನಿಸಿದ ಬಳಿಕ ವಿಚ್ಛೇದನದ ನಿರ್ಧಾರ ಮಾಡಿರುವುದಾಗಿ ಹೇಳಿದ್ದರು.
ಕಳೆದ ಕೆಲವು ದಿನಗಳಿಂದ ಪತಿ ಜೊತೆ ಮಾತನಾಡಲು ಅವಕಾಶ ಕೇಳಿದ್ದೆ. ಇಬ್ಬರ ನಡುವೆ ಮಾತುಕತೆ ಆಗಬಹುದು ಎಂದು ಭಾವಿಸಿದ್ದೇನೆ. ಆದರೆ ಇದಕ್ಕೆ ಮೊದಲೇ ಅವರು ನನಗೂ ಹೇಳದೇ ವಿಚ್ಛೇದನ ಘೋಷಣೆ ಮಾಡಿದ್ದಾರೆ. ನಾನು ಸಮಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಆರತಿ ಹೇಳಿದ್ದಾರೆ.
ಮೊನ್ನೆಯಷ್ಟೇ ಟ್ವೀಟ್ ಮಾಡಿದ್ದ ಜಯಂ ರವಿ, ನಾವಿಬ್ಬರೂ ನಮ್ಮ 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ. ನಮ್ಮ ವೈಯಕ್ತಿಕ ವಿಚಾರವನ್ನು ನೀವು ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ. ಈ ವಿಚಾರದಲ್ಲಿ ಯಾರೂ ಆರೋಪ-ಪ್ರತ್ಯಾರೋಪ ಮಾಡಬಾರದು ಎಂದಿದ್ದರು. ಆದರೆ ಈಗ ಅವರ ಪತ್ನಿಯಿಂದಲೇ ವಿಚ್ಛೇದನ ನಿರ್ಧಾರದ ಬಗ್ಗೆ ಅಪಸ್ವರ ಕೇಳಿಬಂದಿದೆ.