Publish Date: Wed, 12 Jun 2024 (11:51 IST)
Updated Date: Wed, 12 Jun 2024 (12:02 IST)
ಬೆಂಗಳೂರು: ನಟ ದರ್ಶನ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಿಂದ ಯಾರೂ ಬಾಯಿಬಿಡುತ್ತಿಲ್ಲ. ಆದರೆ ಇದೀಗ ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದು ಪರೋಕ್ಷವಾಗಿ ದರ್ಶನ್ ಗೆ ಟಾಂಗ್ ನೀಡಿದ್ದಾರೆ.
ಈ ಹಿಂದೆ ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಶೂಟಿಂಗ್ ಸ್ಥಳಕ್ಕೆ ನುಗ್ಗಿ ಜಗ್ಗೇಶ್ ಗೆ ಮುತ್ತಿಗೆ ಹಾಕಿ ಧಮ್ಕಿ ಹಾಕಿದ್ದರು. ಈ ಘಟನೆ ವೇಳೆ ಜಗ್ಗೇಶ್ ತೀರಾ ಕುಗ್ಗಿ ಹೋಗಿದ್ದರು. ಮಾಧ್ಯಮಗಳ ಮುಂದೆಯೇ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ದರ್ಶನ್ ಮಧ್ಯಪ್ರವೇಶಿಸಿ ತಮ್ಮ ಅಭಿಮಾನಿಗಳಿಗೆ ಸುಮ್ಮನಿರುವಂತೆ ಹೇಳಿದ್ದರು.
ಇದೀಗ ದರ್ಶನ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಿದ್ದಂತೇ ಜಗ್ಗೇಶ್ ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅವರವರು ಮಾಡಿದ ಕರ್ಮದ ಫಲ ಅನುಭವಿಸಲೇಬೇಕು. ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ ಎಂದು ಜಗ್ಗೇಶ್ ಸಂದೇಶ ಬರೆದುಕೊಂಡಿದ್ದಾರೆ.
ಸರ್ವ ಆತ್ಮಾನೇನ ಬ್ರಹ್ಮ
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲು ಹಕ್ಕು ಜೀವನಗಿಲ್ಲಾ!
ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕೂ ತತಕ್ಷಣ ಫಲಿತಾಂಶ ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!
ಎಂದು ಬರೆದುಕೊಂಡಿದ್ದಾರೆ. ಅವರ ಈ ಕಾಮೆಂಟ್ ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.