Publish Date: Tue, 11 Jun 2024 (16:48 IST)
Updated Date: Tue, 11 Jun 2024 (17:06 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ಮುಂದೆ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾನು ಶೆಡ್ ಬಳಿ ಆತನನ್ನು ನೋಡಲು ಹೋಗಿದ್ದು ನಿಜ. ಆತ ಯಾರು ಎಂದು ತಿಳಿಯಲು ಹೋಗಿದ್ದೆ ಅಷ್ಟೇ. ಬಳಿಕ ನಾನು ಅಲ್ಲಿಂದ ವಾಪಸ್ ಬಂದೆ. ಮತ್ತೆ ಅಲ್ಲಿ ಏನಾಯ್ತು ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ನಾನು ನನ್ನ ಹುಡುಗರಿಗೆ ಸ್ವಲ್ಪ ಹೆದರಿಸಲು ಹೇಳಿ ಬಂದಿದ್ದೆ ಎಂದಿದ್ದಾರೆ.
ನಟ ದರ್ಶನ್ ಸುತ್ತಾ ಆತ್ಮೀಯರ ಬಳಗವೇ ಇರುತ್ತದೆ. ಇವರಿಂದಲೇ ದರ್ಶನ್ ಪದೇ ಪದೇ ವಿವಾದಕ್ಕೊಳಗಾಗುತ್ತಿರುವುದೂ ಸುಳ್ಳಲ್ಲ. ಈ ಹಿಂದೆ ಮಹಿಳೆಗೆ ನಾಯಿ ಕಚ್ಚಿದ ಪ್ರಕರಣದಲ್ಲಿ, ನವರಸನಾಯಕ ಜಗ್ಗೇಶ್ ಗೆ ಬೆದರಿಕೆ ಹಾಕಿದ ಪ್ರಕರಣದಲ್ಲೂ ಸಂಗಡಿಗರಿಂದಲೇ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು.
ತಮ್ಮ ಬಾಸ್, ಅಣ್ಣ ಎಂದು ಹೇಳಿಕೊಂಡು ಓಡಾಡುವ ದರ್ಶನ್ ಆಪ್ತರು ಅವರಿಗಾಗಿ ಏನೂ ಮಾಡಲು ಸಿದ್ಧರಿರುತ್ತಾರೆ. ಆದರೆ ಅವರ ಮೇಲಿನ ಅತಿಯಾದ ಅಭಿಮಾನದಿಂದಲೇ ಅವರಿಗೆ ತೊಂದರೆ ತಂದಿಡುತ್ತಿದ್ದಾರೆ ಎಂದರೂ ಸುಳ್ಳಲ್ಲ. ಈಗಲೂ ಅದೇ ರೀತಿ ಆಗಿರಬಹುದೇ ಎಂಬ ಅನುಮಾನ ಕಾಡಿದೆ.