ಬೆಂಗಳೂರು: ಕನ್ನಡ ಶಾಲೆಯ ಕಾರ್ಯಕ್ರಮವೊಂದಕ್ಕೆ ಪರಭಾಷೆ ನಟಿ ಪ್ರಿಯಾ ವಾರಿಯರ್ ನನ್ನು ಕರೆತಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದ ನಟ ಜಗ್ಗೇಶ್ ವಿರುದ್ಧ ಕೆ ಮಂಜು ತಿರುಗೇಟು ನೀಡಿದ್ದಾರೆ.
ಕನ್ನಡದಲ್ಲೇ ಅಷ್ಟೊಂದು ಮಹನೀಯರಿರುವಾಗ ಕಣ್ಸನ್ನೆ ಬೆಡಗಿ ಎಂದು ಖ್ಯಾತಿ ಪಡೆದಿರುವ ಈ ಪರಭಾಷೆ ನಟಿಯನ್ನು ಕರೆತರುವ ಅಗತ್ಯವೇನಿತ್ತು ಎಂದು ನಿರ್ಮಾಪಕ ಕೆ ಮಂಜು ವಿರುದ್ಧ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಂಜು, ಅಸೂಯೆ ಪಡಬಾರದು, ಎಲ್ಲರನ್ನೂ ಬೆಳೆಸಬೇಕು ಎಂದಿದ್ದರು.
ಇದೀಗ ಕೆ ಮಂಜು ಪ್ರತಿಕ್ರಿಯೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಜಗ್ಗೇಶ್, ನನ್ನ ಪದ ಬಳಕೆ ಅರ್ಥವಾಗದೇ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ. ನಾನು ಯಾವ ನಟಿಯನ್ನೂ ವಿರೋಧಿಸಿಲ್ಲ. ಅದರಿದಂ ನನಗೇನೂ ಆಗಬೇಕಿಲ್ಲ. ನಿರ್ಮಲಾನಂದ ಸ್ವಾಮಿಗಳ ಮಾರ್ಗದರ್ಶನಕ್ಕಿಂತ ಅಲ್ಲಿದ್ದ ಯುವ ಸಮುದಾಯದವರಿಗೆ ಗ್ಲಾಮರ್ ಮುಖ್ಯವಾಯಿತೆ ವಿನಹ ಬದುಕಿಗೆ ಮಾರ್ಗದರ್ಶನ ತೋರುವ ಮಾತು ನಗಣ್ಯವಾಯಿತೆ ಎಂದು ಕೊರಗಿದೆ. ಬರವಣಿಗೆ ಅರ್ಥವಾಗದ ಮಹನೀಯರು ಎಂದು ಜಗ್ಗೇಶ್ ಖಾರವಾಗಿ ತಿರುಗೇಟು ನೀಡಿದ್ದಾರೆ.