ಕೊಚ್ಚಿ: ಕಂಪ್ಲೀಟ್ ಸ್ಟಾರ್ ಮೋಹನ್ ಲಾಲ್ ನಾಯಕರಾಗಿರುವ ಎಂಪುರಾನ್ ಸಿನಿಮಾ ನೋಡಿದ ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂಗಳೇ ವಿಲನ್ ಗಳಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಮೋಹನ್ ಲಾಲ್ ಸಿನಿಮಾಗಳೆಂದರೆ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆಯಿರುತ್ತದೆ. ಆದೇ ರೀತಿ ಎಂಪುರಾನ್ ಸಿನಿಮಾ ಮೇಲೆಯೂ ಅಷ್ಟೇ ನಿರೀಕ್ಷೆಯಿತ್ತು. ಆದರೆ ಸಿನಿಮಾ ನೋಡಿದ ಕೆಲವು ಮೋಹನ್ ಲಾಲ್ ಕಟ್ಟಾ ಅಭಿಮಾನಿಗಳೇ ನಿರಾಸೆ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಹಿಂದೂಗಳು ವಿಲನ್ ಗಳು ಎನ್ನುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಎಲ್ಲಾ ಮಲಯಾಳಂ ಸಿನಿಮಾಗಳಲ್ಲಿ ಇದೇ ರೀತಿ ಇರುತ್ತದೆ. ಆದರೆ ಮೋಹನ್ ಲಾಲ್ ಸಿನಿಮಾನೂ ಹೀಗೇನಾ? ಮೋಹನ್ ಲಾಲ್ ಮೂಲಕ ನಿರ್ದೇಶಕ, ನಟ ಪೃಥ್ವಿರಾಜ್ ತಮ್ಮ ಚಿಂತನೆಗಳನ್ನು ಹೇರಿದ್ದಾರೆ ಎಂದು ಕೆಲವರು ಆಪಾದಿಸಿದ್ದಾರೆ. ಸಿನಿಮಾದಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಹೊಂದಿರುವ ಟ್ರೈನ್ ಗೆ ಬೆಂಕಿ ಬೀಳುತ್ತದೆ. ಇದನ್ನೇ ಇಟ್ಟುಕೊಂಡ ಹಿಂದೂ ಸಂಘಟನೆಯ ನಾಯಕರು ಮುಸ್ಲಿಮರನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ಹಿಂದೂ ನಾಯಕನೊಬ್ಬ ಓರ್ವ ಗರ್ಭಿಣಿ ಸೇರಿದಂತೆ ಮುಸ್ಲಿಮರನ್ನು ಕೊಲೆ ಮಾಡುತ್ತಾನೆ. ಅಲ್ಲಿಂದ ಮುಸ್ಲಿಂ ಯುವಕ ತಪ್ಪಿಸಿಕೊಂಡು ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ಮಾಡುತ್ತಾನೆ. ಇದೆಲ್ಲವೂ ಹಿಂದೂಗಳ ವಿರುದ್ಧ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಕೆಲವರು ಈ ಸಿನಿಮಾದಲ್ಲಿ ದೇಶದ ಉನ್ನತ ತನಿಖಾ ಸಂಸ್ಥೆಗಳನ್ನು ಅವಮಾನ ಮಾಡಲಾಗಿದೆ ಎಂದೂ ಆರೋಪಿಸಿದ್ದಾರೆ. ಇದೆಲ್ಲದರ ನಡುವೆಯೂ ಎಂಪುರಾನ್ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದೆ.