Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬೆಂಗಳೂರಿನಲ್ಲಿ ಪತಿ ಜೊತೆ ಊಟಕ್ಕೆ ಹೋಗಿದ್ದಾಗ ನಡೆದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ.
ನಾವು ಬೆಂಗಳೂರಿನಲ್ಲಿ ಸುರಕ್ಷಿತವಾಗಿದ್ದೇವೆಯೇ? ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ? ಎಂದು ತಮಗಾದ ಕಹಿ ಘಟನೆಯನ್ನು ವಿವರಿಸಿದ್ದಾರೆ. ಅವರು ಸೋಷಿಯಲ್ ಮೀಡಿಯಾ ಮೂಲಕ ಸುದೀರ್ಘವಾಗಿ ತಮಗಾದ ಕಹಿ ಘಟನೆಯನ್ನು ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.
ಒಂದಷ್ಟು ಯೋಚಿಸಿ ಕೆಲವು ದಿನಗಳ ಮೊದಲು ನಡೆದ ಘಟನೆಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ಸ್ನೇಹಿತರು, ಕುಟುಂಬದವರ ಜೊತೆ ಮಾತನಾಡಿದ ಬಳಿಕ ಈ ಘಟನೆಯನ್ನು ಅಲ್ಲಿಗೇ ಬಿಡುತ್ತೇನೆ ಎಂದು ಯೋಚಿಸಿದ್ದೆ. ಆದರೆ ನನ್ನ ಅನುಭವದಿಂದ ಮತ್ತಿತರರಿಗೆ ಸಹಾಯವಾಗಬಹುದು ಎಂದು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.
ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೋರೆಂಟ್ ನಲ್ಲಿ ಸಂಜೆ ಕುಟುಂಬದವರೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್ ನಿಂದ ವಾಹನವನ್ನು ಪಡೆದು ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಿಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ನಿಮ್ಮ ವಾಹನವು ತುಂಬಾ ದೊಡ್ಡದಿದೆ. ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು. ನನ್ನ ಪತಿ ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ ಎಂದರು. ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು. ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಶುರು ಮಾಡಿದರು. ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ನನ್ನ ಪತಿಯ ಮುಖದ ಮೇಲೆ ಹೊಡೆಯಲು ಬಂದರು. ನನ್ನ ಪತಿ ತುಂಬಾ ತಾಳ‍್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು, ಸಾಮಾನ್ಯವಾಗಿ ಅವರು ಬೇಗನೇ ಸಿಟ್ಟಾಗುತ್ತಾರೆ.
2-3 ನಿಮಿಷಗಳಲ್ಲಿ ಅದೇ ಗ್ಯಾಂಗ್ ನ 20-30 ಸದಸ್ಯರು ಜಮಾಯಿಸಿದರು ಮತ್ತು ಅವರಲ್ಲಿ ಎರಡು ಜನ ನನ್ನ ಗಂಡನ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಅದು ಗೊತ್ತಾಗಿ ನನ್ನ ಗಂಡ ಅದನ್ನು ನನಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕೈಗೆ ಸಿಗದೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಸಲು ಹೋಗಲಿಲ್ಲ. ಅಲ್ಲದೆ, ನಾನು ಗಮನಿಸಿದ್ದು ಏನೆಂದರೆ ಅವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎನ್ನುವುದು ಸಮಸ್ಯೆಯಾಗಿತ್ತು. ನಿಮ್ಮ ಕನ್ನಡ ಸ್ಟೈಲ್ ನ್ನು ನೀವೇ ಇಟ್ಟುಕೊಳ್ಳಿ ಎಂದು ಉರ್ದು, ಹಿಂದಿ ಮತ್ತು ಅರೆ ಕನ್ನಡದಲ್ಲಿ ಮಾತನಾಡಲು ಶುರು ಮಾಡಿದರು. ನಾನು ನಮಗೆ ಪರಿಚಯವಿದ್ದ ಒಬ್ಬರು ಇನ್ಸ್ ಪೆಕ್ಟರ್ ಗೆ ಕರೆ ಮಾಡಿದಾಗ ಎಲ್ಲರೂ ಏನೂ ಆಗಿಲ್ಲವೆಂಬಂತೆ ಚದುರಿದರು. ನಾವು ಸಮೀಪದಲ್ಲಿದ್ದ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ಎಎಸ್ ಐ ಶ್ರೀ ಉಮೇಶ್ ಅವರಿಗೆ ವಿವರಿಸಿದೆವು. ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ. ಕೇವಲ 2 ಕಟ್ಟಡಗಳ ಮುಂದಿನ ಜ್ಯೂಸ್ ಸೆಂಟರ್ ಬಳಿ ಕಾರಿನಲ್ಲಿ ಮೂಸುಂಬಿ ಜ್ಯೂಸ್ ಕುಡಿಯುತ್ತಾ ಕುಳಿತಿದ್ದರು.
ಈ ಘಟನೆಯ ನಂತರ ನಾನು ಮಾನಸಿಕವಾಗಿ ಆಘಾತಗೊಂಡಿದ್ದೇನೆ. ನಾನು ಹುಟ್ಟಿಬೆಳೆದ ಬೆಂಗಳೂರಿನಲ್ಲಿ ಹೊರಗೆ ಹೋಗಲು ನನಗೆ ಇನ್ನೂ ಭಯವಾಗುತ್ತಿದೆ. ನನಗೆ ಜೀವನವನ್ನು ಕೊಟ್ಟ ನಗರದಲ್ಲಿ ಇಂತಹ ಅನುಭವವಾಗಿದ್ದು ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಮತ್ತು ಯಾವುದೇ ಮಹಿಳೆಯರು, ಕುಟುಂಬದವರು ಇಂತಹ ಪರಿಸ್ಥಿತಿ ಎದುರಿಸಬಾರದು ಎಂದು ಈ ಘಟನೆಯನ್ನು ಇಲ್ಲಿ ಹಾಕುತ್ತಿದ್ದೇನೆ.