Publish Date: Thu, 16 May 2024 (11:43 IST)
Updated Date: Thu, 16 May 2024 (11:45 IST)
ಚೆನ್ನೈ: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಕೊನೆಗೂ ಶೂಟಿಂಗ್ ಮುಗಿಸಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತವಾಗಿ ಪ್ರಕಟಣೆ ನೀಡಬೇಕಿದೆ.
ಚೆನ್ನೈನಲ್ಲಿ ಕಳೆದ ಕೆಲವು ಸಮಯದಿಂದ ಬೀಡುಬಿಟ್ಟಿದ್ದ ಕಿಚ್ಚ ವಿಶೇಷ ಸೆಟ್ ನಲ್ಲಿ ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ಸಿನಿಮಾಗಾಗಿ ಸುದೀಪ್ ದೇಹ ಹುರಿಗೊಳಿಸಿದ್ದರು. ಚಿತ್ರದಲ್ಲಿ ಅದಕ್ಕೆ ತಕ್ಕಂತೆ ಅದ್ಭುತ ಸಾಹಸ ಸನ್ನಿವೇಶಗಳೂ ಇವೆಯಂತೆ.
ಆದರೆ ಚಿತ್ರತಂಡ ಒಂದು ಪೋಸ್ಟರ್ ಬಿಟ್ಟಿದ್ದು ಬಿಟ್ಟರೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಹೀಗಾಗಿ ಅಭಿಮಾನಿಗಳ ತಾಳ್ಮೆ ಮಿತಿ ಮೀರಿತ್ತು. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಕ್ಸ್ ಅಪ್ ಡೇಟ್ ಕೊಡಿ ಎಂದು ಸುದೀಪ್ ಗೆ ಕೇಳುತ್ತಲೇ ಇದ್ದರು. ತಡವಾಗುತ್ತಿರುವುದಕ್ಕೆ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಇದೀಗ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿ ಬರುತ್ತಿದೆ. ಕಿಚ್ಚ ಸುದೀಪ್ ಸಿನಿಮಾ ಕೊನೆಯದಾಗಿ ಬಿಡುಗಡೆಯಾಗಿದ್ದು 2022 ರಲ್ಲಿ. ಅಂದರೆ ಬರೋಬ್ಬರಿ 2 ವರ್ಷಗಳ ಬಳಿಕ ಸುದೀಪ್ ಮತ್ತೊಂದು ಸಿನಿಮಾ ಕೊಡುತ್ತಿದ್ದಾರೆ. ಇಷ್ಟು ತಡವಾಗಿರುವುದಕ್ಕೆ ಸುದೀಪ್ ಅಭಿಮಾನಿಗಳೂ ಬೇಸರದಿಂದಿದ್ದಾರೆ. ಆದರೆ ಈ ಸಿನಿಮಾದಲ್ಲಿ ಸುದೀಪ್ ಮಾಡಿರುವ ಸಾಹಸ ಸನ್ನಿವೇಶಗಳನ್ನು ನೋಡಿದರೆ ಅಭಿಮಾನಿಗಳ ಬೇಸರವೆಲ್ಲಾ ಕಳೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.