Publish Date: Wed, 07 Aug 2024 (13:01 IST)
Updated Date: Wed, 07 Aug 2024 (13:04 IST)
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮಿಳಿನ ಸ್ಟಾರ್ ನಟ ವಿಕ್ರಮ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದು ಕೊನೆಗೂ ನನ್ನ ಕನಸು ನನಸಾಯಿತು ಎಂದು ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಕಾಂತಾರ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ ತಮಿಳು ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಿದ್ದಾರೆ. ಯಾವ ಕಾರಣಕ್ಕೆ ಭೇಟಿಯಾಗಿದ್ದು ಎಂಬುದನ್ನು ಶೆಟ್ಟರು ಬಿಟ್ಟುಕೊಟ್ಟಿಲ್ಲ. ಆದರೆ ವಿಕ್ರಮ್ ಬಗ್ಗೆ ತಮ್ಮ ಅಭಿಮಾನವನ್ನು ಅಕ್ಷರ ರೂಪದಲ್ಲಿ ಪ್ರಕಟಿಸಿದ್ದಾರೆ.
ನಾನೊಬ್ಬ ನಟನಾಗಬೇಕು ಎಂಬ ಪ್ರಯಾಣದಲ್ಲಿ ನನಗೆ ಸ್ಪೂರ್ತಿಯಾದವರಲ್ಲಿ ಚಿಯಾನ್ ವಿಕ್ರಮ್ ಅವರೂ ಒಬ್ಬರು. 24 ವರ್ಷಗಳ ನಂತರ ನನ್ನ ಮೆಚ್ಚಿನ ಹೀರೋನನ್ನು ಭೇಟಿಯಾದೆ, ಈಗ ನಾನು ಜಗತ್ತಿನ ಅತ್ಯಂತ ಅದೃಷ್ಟಶಾಲಿ ಎನಿಸುತ್ತಿದೆ. ನನ್ನಂತಹವರಿಗೆ ಸ್ಪೂರ್ತಿಯಾಗಿದ್ದಕ್ಕೆ ಧನ್ಯವಾದಗಳು ಸರ್ ಮತ್ತು ನಿಮ್ಮ ಮುಂದಿನ ತಂಗಳಾನ್ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದು ರಿಷಬ್ ಬರೆದುಕೊಂಡಿದ್ದಾರೆ.
ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ನಿಮ್ಮಿಬ್ಬರನ್ನೂ ಒಟ್ಟಿಗೇ ತೆರೆ ಮೇಲೆ ನೋಡಬೇಕು ಎಂಬುದು ನಮ್ಮ ಆಸೆ. ಕಾಂತಾರ ಸಿನಿಮಾದಲ್ಲೇ ಯಾಕೆ ನೀವಿಬ್ಬರೂ ಒಟ್ಟಿಗೆ ನಟಿಸಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.