ಬೆಂಗಳೂರು: ಕ್ಯಾನ್ಸರ್ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದು ಅಮೆರಿಕಾದಿಂದ ಶಸ್ತ್ರಚಿಕಿತ್ಸೆ ಮುಗಿಸಿ ಬರುತ್ತಿರುವ ನಟ ಶಿವರಾಜ್ ಕುಮಾರ್ ಗೆ ಭರ್ಜರಿ ಸ್ವಾಗತ ನೀಡಲು ಫ್ಯಾನ್ಸ್ ಸಿದ್ಧತೆ ನಡೆಸಿದ್ದಾರೆ.
ಶಿವರಾಜ್ ಕುಮಾರ್ ಗೆ ಮೂತ್ರಕೋಶದ ಕ್ಯಾನ್ಸರ್ ಗಾಗಿ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ಇದಾದ ಬಳಿಕ ಕಳೆದ ಮೂರು ವಾರಗಳಿಂದ ಅವರು ಅಮೆರಿಕಾದಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಜರಿ ಬಳಿಕ ಚೇತರಿಸಿಕೊಂಡಿರುವ ಶಿವಣ್ಣ ಅಮೆರಿಕಾದಲ್ಲಿ ಕನ್ನಡ ಕಾರ್ಯಕ್ರಮವೊಂದರಲ್ಲೂ ಭಾಗಿಯಾಗಿದ್ದಾರೆ. ಫ್ಯಾಮಿಲಿ ಜೊತೆ ಔಟಿಂಗ್ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಶಿವಣ್ಣ ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಜನವರಿ 26 ರಂದು ಅವರು ಭಾರತಕ್ಕೆ ಮರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ವಿಮಾನ ನಿಲ್ದಾಣದಲ್ಲಿಯೇ ಭರ್ಜರಿ ಸ್ವಾಗತ ನೀಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಶಿವಣ್ಣನ ನಿವಾಸದ ಮುಂದೆಯೂ ಅಭಿಮಾನಿಗಳು ಸೇರಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ.