ಬೆಂಗಳೂರು: ಬಹುನಿರೀಕ್ಷಿತ ಸಲಾರ್ ಸಿನಿಮಾ ನಿನ್ನೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದಿದೆ.
ಆದರೆ ಕೆಲವರು ಈ ಸಿನಿಮಾ ಕೆಜಿಎಫ್ ನಷ್ಟು ಕ್ರೇಜ್ ಸೃಷ್ಟಿಸಿಲ್ಲ ಎಂದವರಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹವಾ ಅಂತಹದ್ದು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಕೆಜಿಎಫ್ ಬಳಿಕ ಯಶ್ ಹವಾ ದೇಶದಾದ್ಯಂತ ಅಷ್ಟು ಜೋರಾಗಿದೆ. ನಿನ್ನೆ ಸಲಾರ್ ಪ್ರದರ್ಶನದ ನಡುವೆ ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಪ್ರಸಾರ ಮಾಡಲಾಗಿತ್ತು. ಥಿಯೇಟರ್ ಒಂದರಲ್ಲಿ ಯಶ್ ಟಾಕ್ಸಿಕ್ ಲುಕ್ ಕಾಣುತ್ತಿದ್ದಂತೇ ಅಭಿಮಾನಿಗಳು ಹುಚ್ಚೆದ್ದು ಕುಣಿದ ದೃಶ‍್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿದ್ದರು. ಟಾಕ್ಸಿಕ್ ಎನ್ನುವ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದರು. ಯಶ್ ಮುಂದಿನ ಸಿನಿಮಾಗೆ ಎಷ್ಟು ಕ್ರೇಜ್ ಇದೆ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತಿದೆ.