Publish Date: Thu, 28 May 2020 (09:44 IST)
Updated Date: Thu, 28 May 2020 (09:47 IST)
ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಟ್ವೀಟ್ ಮಾಡುವಾಗ ಯಾವ ಗಳಿಗೆಯಲ್ಲಿ ‘ಬಾಸ್’ ಎಂದು ಕರೆದರೋ ಆವಾಗಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ಅಭಿಮಾನಿಗಳ ನಡುವೆ ಸ್ಯಾಂಡಲ್ ವುಡ್ ಬಾಸ್ ಯಾರು ಎನ್ನುವ ವಿಚಾರಕ್ಕೆ ಕಿತ್ತಾಟ ಶುರುವಾಯಿತು.
ಇದು ಯಾವ ಮಟ್ಟಿಗೆ ಹೋಗಿದೆಯೆಂದರೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ಸ್ಟಾರ್ ನಟನ ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್, ಮೆಮೆಗಳ ಮೂಲಕ ತಮಾಷೆ ಮಾಡುವ ಹಂತಕ್ಕೆ ಬಂದಿದೆ.
ಇಷ್ಟೆಲ್ಲಾ ರದ್ದಾಂತವಾದ ಬಳಿಕ ಈಗ ಪವನ್ ಒಡೆಯರ್ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ದರ್ಶನ್ ಬಗ್ಗೆ ಹೊಗಳಿ ಬರೆದಿದ್ದಾರೆ. ಮೊನ್ನೆ ಯಶ್ ಜತೆಗೆ ಪ್ರಕಟಿಸಿದ್ದಂತೇ ಫೋಟೋವನ್ನು ಪ್ರಕಟಿಸಿದ ಪವನ್ ‘ಎಂತಹ ಸಂಕಷ್ಟ ಬಂದರೂ ಅದನ್ನು ಎದುರಿಸಿ, ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ, ಸದಾ ಎಲ್ಲರಿಗೂ ಒಳ್ಳೆಯದಾಗಲಿ ಅನ್ನುವ ಅವರ ಗುಣ ಅದ್ಭುತ, ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ ದರ್ಶನ್ ಸರ್. ಬದಲಾಗು ನೀನು ಬದಲಾಯಿಸು ನೀನು ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕೆ ಥ್ಯಾಂಕ್ಸ್ ಸರ್’ ಎಂದು ಬರೆದಿದ್ದಾರೆ.
ಈ ಮೂಲಕ ದರ್ಶನ್ ಅವರನ್ನು ಹೊಗಳಿ ಬರೆದು ಅಭಿಮಾನಿಗಳ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇಷ್ಟಕ್ಕೇ ಸುಮ್ಮನಾಗದ ಕೆಲವರು ಮೊನ್ನೆ ಯಶ್ ರನ್ನು ಬಾಸ್ ಅಂದಿರಿ, ಈವತ್ತು ದರ್ಶನ್ ರನ್ನು ಹೊಗಳುತ್ತೀರಿ. ನೀವು ಯಾವ ಕಡೆ ಎಂದು ಟ್ರೋಲ್ ಮಾಡಿದ್ದಾರೆ.