ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸಹ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಜೈಲಿನಲ್ಲಿ ತಮ್ಮ ಸಹಚರರೊಂದಿಗೆ ಕಿತ್ತಾಡಿಕೊಂಡಿದ್ದಾರೆ. ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಅವರ ಕಾಟ ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು.
ಆದರೆ ಈಗ ಈ ಎಲ್ಲಾ ಆರೋಪಗಳಿಗೆ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಈ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ. ಇಂದು ಜೈಲಿಗೆ ಭೇಟಿ ನೀಡಿದಾಗ ಅಧಿಕಾರಿಗಳೊಂದಿಗೆ, ನನ್ನ ಪತಿಯೊಂದಿಗೆ ಮತ್ತು ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲವನ್ನೂ ನೇರವಾಗಿ ನೋಡಿ ಅರ್ಥ ಮಾಡಿಕೊಳ್ಳಲು ಬಯಸಿದ್ದೆ. ಎಲ್ಲರನ್ನೂ ಕೇಳಿದ ನಂತರ ಒಂದು ವಿಷಯ ಸ್ಪಷ್ಟವಾಯಿತು. ಈ ಆರೋಪಗಳು ನಕಲಿ ಮತ್ತು ನಿರಾಧಾರ ಮತ್ತು ದುರುದ್ದೇಶದಿಂದ ಸೃಷ್ಟಿಸಿದ್ದಾಗಿದೆ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆ, ಇತರೆ ಖೈದಿಗಳಿಗೂ ನರಕ ದರ್ಶನ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.