ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ಮುಚ್ಚಿಹಾಕಲು ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದ ನಟ ದರ್ಶನ್ ಗೆ ಈಗ ಐಟಿ ದಾಳಿ ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ಮುಚ್ಚಿಹಾಕಲು ದರ್ಶನ್ 80 ಲಕ್ಷ ರೂ.ಗಳಷ್ಟು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಜೈಲಿನಲ್ಲಿ ರಾಜಾತಿಥ್ಯ ಪಡೆಯಲು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳೊಂದಿಗೆ 8 ಲಕ್ಷ ರೂ.ಗಳ ಡೀಲ್ ಮಾಡಿಕೊಂಡಿದ್ದರು ಎಂಬ ವದಂತಿಯೂ ಇದೆ.
ಈ ವಿಚಾರವನ್ನು ಪೊಲೀಸರು ಐಟಿ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ದರ್ಶನ್ ರನ್ನು ವಿಚಾರಣೆ ನಡೆಸಲಿದ್ದಾರೆ. ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಯಲಿದ್ದು, ಬಳ್ಳಾರಿ ಜೈಲಿನಿಂದಲೇ ದರ್ಶನ್ ವಿಚಾರಣೆ ಎದುರಿಸಲಿದ್ದಾರೆ.
ಈಗಾಗಲೇ ಹತ್ಯೆ ಪ್ರಕರಣದಲ್ಲಿ ಪೊಲೀಸರು ಅವರ ಬುಡಮೇಲು ಮಾಡಿ ಮಾಹಿತಿ ಕಲೆ ಹಾಕಿದ್ದರು. ದರ್ಶನ್ ವೈಯಕ್ತಿಕ ವಿಚಾರಗಳೆಲ್ಲವೂ ಈಗ ಬಹಿರಂಗವಾಗಿದೆ. ಇದೀಗ ಹಣಕಾಸಿನ ವ್ಯವಹಾರದ ಬಗ್ಗೆ ಹಲವು ವಿಚಾರಗಳು ಹೊರಬೀಳುವ ಸಾಧ್ಯತೆಯಿದೆ. ಅಷ್ಟೊಂದು ಹಣ ನಿಮಗೆ ಹೇಗೆ ಬಂತು, ಹಣದ ಮೂಲವೇನು ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.