Publish Date: Fri, 11 Oct 2024 (14:16 IST)
Updated Date: Fri, 11 Oct 2024 (14:19 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಜಾಮೀನು ತೀರ್ಪು ಸೋಮವಾರ ಪ್ರಕಟವಾಗಲಿದೆ. ಒಂದು ವೇಳೆ ಅವರಿಗೆ ಜಾಮೀನು ಸಿಗದೇ ಇದ್ದರೆ ಬೆಂಗಳೂರಿನ ಜೈಲಿಗಾದರೂ ಶಿಫ್ಟ್ ಮಾಡಿಸಬೇಕು ಎಂದು ಅವರು ಪ್ರಯತ್ನಿಸುತ್ನಿದ್ದಾರೆ.
ದರ್ಶನ್ ಗೆ ಮುಖ್ಯವಾಗಿ ಪ್ಲಸ್ ಪಾಯಿಂಟ್ ಆಗಿರುವುದು ಅವರ ಬೆನ್ನು ನೋವು. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಇದೇ ಕಾರಣವನ್ನಿಟ್ಟುಕೊಂಡು ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿಸಲು ನ್ಯಾಯಾಧೀಶರ ಮುಂದೆ ಮನವಿ ಮಾಡಲಿದ್ದಾರೆ. ಇದಕ್ಕಾಗಿ ಅವರ ವೈದ್ಯಕೀಯ ಪರೀಕ್ಷೆ ಕೋರ್ಟ್ ಗೆ ಸಲ್ಲಿಸಬೇಕಾಗುತ್ತದೆ.
ಬಳ್ಳಾರಿ ಜೈಲಿನಲ್ಲೇ ವೈದ್ಯಾಧಿಕಾರಿಗಳು ಬಂದು ತಪಾಸಣೆ ಮಾಡಿದ್ದು ದರ್ಶನ್ ಗೆ ಸ್ಕ್ಯಾನಿಂಗ್ ಮತ್ತು ಶಸ್ತ್ರಚಿಕಿತ್ಸೆಗೊಳಗಾಗುವಂತೆ ಹೇಳಿದ್ದರು. ಆದರೆ ವೈದ್ಯರ ಸಲಹೆ ಒಪ್ಪದ ದರ್ಶನ್ ಏನೇ ಇದ್ದರೂ ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುವುದಾಗಿ ಹಠ ಹಿಡಿದಿದ್ದಾರೆ.
ಇದರ ನಡುವೆ ಅವರಿಗೆ ತೀವ್ರ ಬೆನ್ನು ನೋವು ಕಾಡುತ್ತಿದ್ದು ಮೊನ್ನೆ ಆರ್ಥೋಪೆಡಿಕ್ ಸರ್ಜನ್ ಮತ್ತು ಇಂದು ನ್ಯೂರೋ ತಜ್ಞ ಭೇಟಿ ಜೈಲಿಗೆ ನೀಡಿ ತಪಾಸಣೆ ನಡೆಸಿದ್ದಾರೆ. ಇಂದು ತಪಾಸಣೆ ಬಳಿಕ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಅವರು ವರದಿ ತಯಾರಿಸಿ ಕೋರ್ಟ್ ಗೆ ಸಲ್ಲಿಸಲಿದ್ದಾರೆ.
ಆ ವರದಿಯ ಅನ್ವಯ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನವಾಗಲಿದೆ. ಒಂದು ವೇಳೆ ಸೋಮವಾರ ಜಾಮೀನು ಸಿಗದೇ ಇದ್ದರೆ ವೈದ್ಯಕೀಯ ವರದಿ ಅನ್ವಯ ದಾಸ ಬಳ್ಳಾರಿ ಜೈಲಿನಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.