ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ನಟ ದರ್ಶನ್, ಪವಿತ್ರಾ ಗೌಡ ಸಹಿತ 7 ಪ್ರಮುಖ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ನಿನ್ನೆ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೇ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಸಂಜೆ ಎಲ್ಲಾ ಆರೋಪಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ರವಾನಿಸಲಾಗಿದೆ.
ಇದೀಗ ದರ್ಶನ್, ಪ್ರದೋಷ್, ಲಕ್ಷ್ಮಣ್, ಜಗದೀಶ್, ನಾಗರಾಜ್ ಒಂದೇ ಬ್ಯಾರಕ್ ನಲ್ಲಿದ್ದಾರೆ. ಹೀಗಾಗಿ ದರ್ಶನ್ ಕೊಂಚ ಗೆಲುವಾಗಿಯೇ ಇದ್ದರು. ತಮ್ಮ ಸ್ನೇಹಿತರ ಜೊತೆ ಹರಟೆ ಹೊಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಪ್ರದೋಷ್ ಮಾತ್ರ ಕೊಂಚ ಮಂಕಾಗಿದ್ದರು ಎನ್ನಲಾಗಿದೆ.
ಇನ್ನು, ಎ1 ಆರೋಪಿ ಪವಿತ್ರಾ ಗೌಡ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ಅವರನ್ನು ಮಹಿಳಾ ಬ್ಯಾರಕ್ ನಲ್ಲಿರಿಸಲಾಗಿದೆ. ಹೀಗಾಗಿ ಅವರು ಮಾತ್ರ ಏಕಾಂಗಿಯಾಗಿದ್ದಾರೆ. ಎಲ್ಲಾ ಆರೋಪಿಗಳಿಗೂ ಜೈಲಿನ ಮೆನವಿನಂತೇ ಚಪಾತಿ, ಅನ್ನ ಸಾಂಬಾರ್, ಮುದ್ದೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸುಪ್ರೀಂಕೋರ್ಟ್ ಕೂಡಾ ಎಲ್ಲಾ ಆರೋಪಿಗಳಿಗೆ ಯಾವುದೇ ವಿಐಪಿ ಟ್ರೀಟ್ ಮೆಂಟ್ ಕೊಡಬಾರದು ಎಂದು ಖಡಕ್ ಸೂಚನೆ ನೀಡಿತ್ತು.