Publish Date: Tue, 29 Aug 2023 (09:31 IST)
Updated Date: Tue, 29 Aug 2023 (09:32 IST)
ಬೆಂಗಳೂರು: ಮಾಧ್ಯಮಗಳೊಂದಿಗೆ ಮುನಿಸಿಗೆ ತೆರೆ ಎಳೆದು, ಸುಮಲತಾ ಅಂಬರೀಶ್ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಮೇಲೆ ನಟ ದರ್ಶನ್ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ.
ಸುಮಲತಾ ಪಾರ್ಟಿಯಲ್ಲಿ ಭಾಗವಹಿಸಿದ ತಕ್ಷಣವೇ ದರ್ಶನ್ ಜೋಡೆತ್ತುಗಳೊಂದಿಗಿನ ಫೋಟೋ ಪ್ರಕಟಿಸಿ, ಕಾಲಾಯ ತಸ್ಮೈ ನಮಃ ಎಂಬ ಸಂದೇಶ ಬರೆದಿದ್ದರು. ಈ ಮೂಲಕ ಕಿಚ್ಚನ ಜೊತೆಗಿನ ಮುನಿಸು ಮರೆತಿರುವುದನ್ನು ಪರೋಕ್ಷವಾಗಿ ಸುಳಿವು ನೀಡಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಏಕಾಂಗಿ ಸಂದೇಶ ಬರೆದು ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.
ಏಕಾಂಗಿ ಸಿನಿಮಾದ ಬಿ ಅಲೋನ್, ಟು ಬಿ ಹ್ಯಾಪಿ, ಬಿ ಹ್ಯಾಪಿ ಟು ಬಿ ಅಲೋನ್ ಎಂದು ಬರೆದು ವಿತ್ ಮೈ ಸೆಲೆಬ್ರಿಟಿಸ್ ಎಂದು ಸಂದೇಶ ಬರೆದಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ ದರ್ಶನ್ ಮಾಧ‍್ಯಮಗಳಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿ ಸಂದೇಶ ಬರೆದಿದ್ದು ಅವರ ಕೆಲವು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ನೀವು ಯಾರ ಮುಂದೆಯೂ ಕೈ ಮುಗಿಯಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಬಹುಶಃ ತಾವು ಪ್ರೀತಿಸುವ ಅಭಿಮಾನಿಗಳಿಗೆ ದರ್ಶನ್ ಈ ಸಂದೇಶ ಬರೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.