Publish Date: Thu, 05 Sep 2024 (09:11 IST)
Updated Date: Thu, 05 Sep 2024 (09:14 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ತಾಯಿಯಾಗಿದ್ದಾರೆ. ಈ ಖುಷಿಯನ್ನು ಪತಿ ಡಾರ್ಲಿಂಗ್ ಕೃಷ್ಣಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ನಮಗೆ ಹೆಣ್ಣು ಮಗುವಾಗಿದೆ. ಅಮ್ಮ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ನೀನು ಅನುಭವಿಸಿದ ನೋವು, ತ್ಯಾಗ ಮತ್ತು ಧೈರ್ಯಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಮಿಲನಾ. ಈ ತ್ಯಾಗ ಮಾಡುವ ಎಲ್ಲಾ ತಾಯಂದಿರಿಗೂ ದೊಡ್ಡ ಧನ್ಯವಾದಗಳು. ನಿನ್ನನ್ನು ನೋಡಿದ ಮೇಲೆ ನನಗೆ ಮಹಿಳೆಯರ ಮೇಲಿನ ಗೌರವ ಇನ್ನಷ್ಟು ಜಾಸ್ತಿಯಾಗಿದೆ. ನನಗೀಗ ಹೆಣ್ಣು ಮಗುವಾಗಿದೆ ಹೀಗಾಗಿ ನಾನು ಅದೃಷ್ಟವಂತ ಎಂದು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಹಳ ವರ್ಷ ಪ್ರೇಮಿಗಳಾಗಿದ್ದ ಜೋಡಿ 2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಮಾರ್ಚ್ ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಇಬ್ಬರೂ ಘೋಷಿಸಿದ್ದರು. ಇದೀಗ ಹೆಣ್ಣು ಮಗುವಿಗೆ ಪೋಷಕರಾದ ಸಂಭ್ರಮದಲ್ಲಿದ್ದಾರೆ ಸ್ಯಾಂಡಲ್ ವುಡ್ ನ ಈ ರಿಯಲ್ ಜೋಡಿ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಮೊದಲಿನಿಂದಲೂ ನಮಗೆ ಹೆಣ್ಣು ಮಗುವಾಗಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಅದರಂತೆ ಈಗ ಹೆಣ್ಣು ಮಗುವಿನ ಜನನವಾಗಿದೆ. ಈ ಖುಷಿಯ ವಿಷಯ ಹಂಚಿಕೊಳ್ಳುತ್ತಿದ್ದಂತೇ ಸಾಕಷ್ಟು ಜನ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರುತ್ತಿದ್ದಾರೆ.