ಕಾರ್ಪೊರೇಟ್ ಜಗತ್ತಿನಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಿಗೆ ಪ್ರತಿಭಾವಂತರು ಆಗಮಿಸೋದು ಹೊಸಾ ಬೆಳವಣಿಗೆಯೇನಲ್ಲ. ಹಾಗೆ ಬಂದವರೆಲ್ಲ ಹೊಸತನದ ಕಂಪನ್ನು ಹೊತ್ತು ತರುತ್ತಾರೆಂಬ ನಂಬಿಕೆಯೂ ಸಹ ಈ ವರೆಗೂ ಸುಳ್ಳಾಗಿಲ್ಲ. ಇದನ್ನು ಮತ್ತಷ್ಟು ನಿಜವಾಗಿಸುವ ಹುಮ್ಮಸ್ಸಿನೊಂದಿಗೆ ಮತ್ತೊಂದು ತಂಡವೀಗ ಮೋಕ್ಷ ಎಂಬ ಚಿತ್ರದೊಂದಿಗೆ ಆಗಮಿಸಿದೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಚಿತ್ರಮಂದಿರಗಳತ್ತ ಮುಖಮಾಡಿರುವ ಮೋಕ್ಷದ ಟೀಸರ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ.
ಬಹುತೇಕ ಹೊಸಬರೇ ತುಂಬಿಕೊಂಡಿರೋ ಮೋಕ್ಷ ಚಿತ್ರವನ್ನು ಸಮರ್ಥ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಇವರು ಹತ್ತಾರು ವರ್ಷಗಳ ಕಾಲ ಸಾಫ್ಟ್ವೇರ್ ಕಂಪೆನಿಗಳ ಜಾಹೀರಾತು ನಿರ್ದೇಶನ ಮಾಡುತ್ತಿದ್ದವರು. ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರೋ ಸಮರ್ಥ್ ಮೋಕ್ಷ ಮೂಲಕ ಚಿತ್ರರಂಗಕ್ಕಾಗಮಿಸಿದ್ದಾರೆ.
ಇದು ಹೊಸಾ ಅಲೆಯ, ಸಿದ್ಧ ಸೂತ್ರಗಳನ್ನು ಮೀರಿಕೊಂಡಿರೋ ಚಿತ್ರವೆಂಬ ಸುಳಿವು ಈಗಾಗಲೇ ಜಾಹೀರಾಗಿದೆ. ಇಲ್ಲಿ ನಾಯಕ ನಾಯಕಿಯರೆಂಬ ಸಿದ್ಧ ಸೂತ್ರಗಳಿಲ್ಲವಂತೆ. ಇಲ್ಲಿ ಕಥೆಯೇ ನಾಯಕ ನಾಯಕಿಯ ಸ್ಥಾನದಲ್ಲಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಇದರ ಪ್ರಧಾನ ಪಾತ್ರಗಳಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ನಟಿಸಿದ್ದಾರೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನೊಳಗೊಂಡಿರುವ ಚಿತ್ರ. ಆದರೆ ಇದರ ಮಾಮೂಲಿ ಜಾಡಿಗೆ ಬದ್ಧವಾಗದೆ ಹೊಸತನದ ಕಥೆ ಮತ್ತು ಪ್ರಯೋಗಾತ್ಮಕ ಅಂಶಗಳೊಂದಿಗೆ ಈ ಚಿತ್ರ ತಯಾರಾಗಿದೆ. ಕಾರ್ಪೋರೇಟ್ ಕಂಪೆನಿಗಳ ಜಾಹೀರಾತು ನಿರ್ದೇಶನ ಮಾಡುತ್ತಲೇ ಸಮರ್ಥವಾದ ತಂಡ ಕಟ್ಟಿಕೊಂಡಿದ್ದ ಸಮರ್ಥ್ ನಾಯಕ್ ಅವರು ಅದೇ ತಂಡದೊಂದಿಗೆ ಮೋಕ್ಷವನ್ನು ರೂಪಿಸಿದ್ದಾರಂತೆ. ಮನೋರಂಜನಾತ್ಮಕ ಅಂಶಗಳನ್ನೂ ಯಥೇಚ್ಚವಾಗಿ ಹೊಂದಿರುವ ಈ ಚಿತ್ರ ಅಪರೂಪದ ಕಥೆಯೊಂದಿಗೆ ಮೈ ಕೈ ತುಂಬಿಕೊಂಡಿದೆ. ಟೀಸರ್ ಲಾಂಚ್ ಆದಾಕ್ಷಣವೇ ಪ್ರಚಾರ ಕಾರ್ಯ ಆರಂಭಿಸಿ ಈ ಚಿತ್ರವನ್ನು ಆದಷ್ಟು ಬೇಗನೆ ತೆರೆಗಾಣಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.