ಮಡಿಕೇರಿ: ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಅವರ ವಿವಾದಾತ್ಮಕ ಹೇಳಿಕೆಯ ನಂತರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೋರಿದ ಕೊಡವ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ನಂದಿನೇದ ನಾಚಪ್ಪ ವಿರುದ್ಧ ದೂರು ದಾಖಲಾಗಿದೆ.
ಮತ್ತೊಂದು ಸಂಘಟನೆ ಸಲ್ಲಿಸಿರುವ ದೂರಿನಲ್ಲಿ, ನಾಚಪ್ಪ ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಇ, ಅವರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಾಜರಾಗಲು ನಿರಾಕಿರಿಸಿದ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕೈ ಶಾಸಕ ರವಿಕುಮಾರ್ ಗಾಣಿಗ ಆಕ್ರೋಶ ಹೊರಹಾಕಿ, ನಟಿಗೆ ತಕ್ಕ ಪಾಠ ಕಲಿಸಬೇಕೆಂದು ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಯಿತು.
ಇದರ ಬೆನ್ನಲ್ಲೇ ಕೊಡವ ಹಕ್ಕುಗಳ ರಕ್ಷಣಾ ಸಂಘಟನೆ, ಕೊಡವ ರಾಷ್ಟ್ರೀಯ ಮಂಡಳಿ, ಮಂದಣ್ಣ ಅವರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ, ಕೇಂದ್ರ ಮತ್ತು ಕರ್ನಾಟಕ ಗೃಹ ಸಚಿವರನ್ನು ರಾಜಕೀಯ ವಿವಾದದ ನಡುವೆ ಅವರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿತು.
ಮಾರ್ಚ್ 3 ರಂದು ಶಾಸಕ ರವಿಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ಕರ್ನಾಟಕದಲ್ಲಿ 'ಕಿರಿಕ್ ಪಾರ್ಟಿ' ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ, ಕಳೆದ ವರ್ಷ ನಾವು ಅವರನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿದಾಗ ಭಾಗವಹಿಸಲು ನಿರಾಕರಿಸಿದರು. ಅವರು, 'ನನಗೆ ಹೈದರಾಬಾದ್‌ನಲ್ಲಿ ಮನೆ ಇದೆ, ಕರ್ನಾಟಕ ಎಲ್ಲಿದೆ ಎಂದು ನನಗೆ ತಿಳಿದಿಲ್ಲ, ಮತ್ತು ನನಗೆ ಸಮಯವಿಲ್ಲ. ನಾನು ಬರಲು ಸಾಧ್ಯವಿಲ್ಲ' ಎಂದು ಹೇಳಿದರು. ನಮ್ಮ ಶಾಸಕ ಸ್ನೇಹಿತರೊಬ್ಬರು ಅವರನ್ನು ಆಹ್ವಾನಿಸಲು 10-12 ಬಾರಿ ಅವರ ಮನೆಗೆ ಭೇಟಿ ನೀಡಿದರು, ಆದರೆ ಅವರು ಇಲ್ಲಿ ಉದ್ಯಮದಲ್ಲಿ ಬೆಳೆದಿದ್ದರೂ ಕನ್ನಡವನ್ನು ನಿರಾಕರಿಸಿದರು ಮತ್ತು ನಿರ್ಲಕ್ಷಿಸಿದರು. ನಾವು ಅವರಿಗೆ ಪಾಠ ಕಲಿಸಬೇಕಲ್ಲವೇ?" ಎಂದು ಹೇಳಿದರು.