ಬೆಂಗಳೂರು: ಪ್ರಚೋದನಕಾರೀ ರೀಲ್ಸ್ ಪ್ರಕಟಿಸಿದ ತಪ್ಪಿಗೆ ಬಂಧಿತರಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಈಗ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ. ಪತಿಯನ್ನು ಬಿಡಿಸಲು ರಜತ್ ಪತ್ನಿ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ.
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಜತ್ ಮತ್ತು ಕಿಶನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಸ್ಥಳ ಮಹಜರು ನಡೆಸಿದ ಬಳಿಕ ನಿನ್ನೆ ರಾತ್ರಿ ಇಬ್ಬರನ್ನೂ ಕೋರಮಂಗಲದಲ್ಲಿರುವ 24 ನೇ ಎಸಿಜೆಎಂ ಜಡ್ಜ್ ನಿವಾಸಕ್ಕೆ ಕರೆತರಲಾಯಿತು. ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಸದ್ಯಕ್ಕೆ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ. ರಾತ್ರಿ ಇಡೀ ಇಬ್ಬರೂ ಜೈಲಿನಲ್ಲೇ ಕಳೆದಿದ್ದಾರೆ. ಇನ್ನು ಪತಿಯನ್ನು ಬಿಡಿಸಲು ಹರಸಾಹಸ ಪಡುತ್ತಿರುವ ರಜತ್ ಪತ್ನಿ ಅಕ್ಷಿತಾ ಕೋರ್ಟ್ ಮುಂದೆಯೇ ಕಣ್ಣೀರು ಹಾಕಿದ್ದಾರೆ.
ರೀಲ್ಸ್ ಮಾಡಲು ಬಳಸಿದ ಮಚ್ಚು ನಾಪತ್ತೆಯಾಗಿದೆ. ಇದಕ್ಕಾಗಿ ಈಗ ಹುಡುಕಾಟ ನಡೆದಿದೆ. ಇಂದು ಇನ್ನು ಇಬ್ಬರೂ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇಂದು ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ.