Publish Date: Thu, 01 Apr 2021 (11:21 IST)
Updated Date: Thu, 01 Apr 2021 (11:22 IST)
ಬೆಂಗಳೂರು: ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಯಾಕೋ ವಿವಾದಗಳಿಂದಲೇ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಮೊನ್ನೆಯಷ್ಟೇ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದ ಜಗ್ಗೇಶ್ ಈಗ ತಮ್ಮದೇ ಪಕ್ಷದ ನಾಯಕ, ನಟ ಬಿಸಿ ಪಾಟೀಲ್ ಜೊತೆಗೆ ಟ್ವಿಟರ್ ನಲ್ಲೇ ಚರ್ಚೆ ನಡೆಸಿದ್ದಾರೆ.
ಜಗ್ಗೇಶ್ ಮೊನ್ನೆಯಷ್ಟೇ, ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಿನಿಮಾ ನೋಡಬೇಡಿ ಎಂದು ಹೇಳಿಕೆ ನೀಡಿದ್ದರು. ಇದು ಬಿಸಿ ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ. ಜಗ್ಗೇಶ್ ಅವರೇ ಇಂತಹ ನಿರುತ್ಸಾಹಗೊಳಿಸುವ ಮಾತನಾಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ ಬೆಳೆದವನಾಗಿರುವುದರಿಂದ ಈ ಮಾತು ಹೇಳುತ್ತಿದ್ದೇನೆ. ನಮ್ಮ, ನಿಮ್ಮ ಮಕ್ಕಳು ಸಹ ಚಿತ್ರರಂಗಕ್ಕೆ ಬರಬೇಕು. ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಬೇಕು ಎಂದು ಸರಣಿ ಟ್ವೀಟ್ ಮಾಡಿ ಬಿಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ಇದಕ್ಕೆ ಉತ್ತರಿಸಿರುವ ಜಗ್ಗೇಶ್, ನನ್ನ ಮಾತನ್ನು ಸರಿಯಾಗಿ ಅರ್ಥೈಸಿಲ್ಲ. ನಾನು ವಕ್ತಾರನಾಗಿ ಹಿರಿಯ ಶಾಸಕರ ಸಭೆಯಲ್ಲಿ ಮಾತನಾಡಿದ್ದು ನಿಮಗೆ ಅಪಾರ್ಥವಾಗಿ ಕಾಣಿಸಿದ್ದು ಹೇಗೆ ನಾಕಾಣೆ. ಒಳ್ಳೆಯ ಮಾತು ಅಪಾರ್ಥ ಮಾಡಿದರೆ ಉತ್ತಮ ಸಮಾಜ ಮೌನವಾಗಿ ಆತ್ಮದಲ್ಲೇ ಉಳಿಯುತ್ತದೆ. ನಾ ಹೇಳಿದ್ದು ಕಲೆಯನ್ನು 2 ಗಂಟೆ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ತಂದೆ-ತಾಯಿ, ಸಮಾಜಕ್ಕೆ ಉತ್ತಮ ನಾಯಕರಾಗಿ. ಸಿನಿಮಾ ನಾಯಕರು ನನ್ನ ಸೇರಿ ನಿಮ್ಮ ರಂಜಿಸುವವರು ಮಾತ್ರ ಎಂದು ನಾನು ಹೇಳಿದ್ದು ಎಂದು ಸಮರ್ಥನೆ ಕೊಟ್ಟಿದ್ದಾರೆ.