ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರಂತ್ಯದ ಶೋ ಯಾಕೋ ಎಲಿಮಿನೇಟ್ ಆಗಿರುವ ಜಗದೀಶ್ ಅವರನ್ನು ಸಮರ್ಥಿಸಿಕೊಳ್ಳುವಂತಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಜಗದೀಶ್ ಗೆ ಕೋರ್ಟ್ ಗೆ ಹೋಗ್ತಾರೆ ಎಂಬ ಭಯಕ್ಕೆ ಹೀಗೆ ಮಾಡಿರಬಹುದು ಎಂದೂ ಕೆಲವರು ಟಾಂಗ್ ಕೊಟ್ಟಿದ್ದಾರೆ.
ಈ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಪ್ರತಿಯೊಬ್ಬ ಸದಸ್ಯರನ್ನೂ ತರಾಟೆಗೆ ತೆಗೆದುಕೊಂಡ ಪರಿ ನೋಡಿ ಕೆಲವರು ಯಾಕೋ ಇದು ಜಗದೀಶ್ ಅವರನ್ನು ಸಮರ್ಥಿಸಿಕೊಂಡಂತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಡುವೆ ಒಮ್ಮೆ ಜಗದೀಶ್ ಮಾಡಿದ್ದು ಸರಿ ಅಂತ ಹೇಳ್ತಿಲ್ಲ ಎಂದು ಕಿಚ್ಚ ಹೇಳಿದರೂ ಅವರು ಎರಡೂ ದಿನದ ಎಪಿಸೋಡ್ ನಲ್ಲಿ ಅವರು ಏನೇ ಹೇಳಿದ್ರೂ ನೀವು ಯಾಕೆ ಆ ರೀತಿ ರಿಯಾಕ್ಟ್ ಮಾಡಿದಿರಿ ಎಂದು ಕೇಳಿದ್ದು ಸ್ಪರ್ಧಿಗಳಿಗೇ ಇಷ್ಟವಾಗಿಲ್ಲ.
ಈ ಬಗ್ಗೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಕಿಚ್ಚ ಸುದೀಪ್ ಸರಿಯಾಗಿಯೇ ಮಾತನಾಡಿದ್ದಾರೆ ಎಂದು ಜಗದೀಶ್ ಗೆ ಬೆಂಬಲಿಸಿದರೆ ಮತ್ತೆ ಕೆಲವರು ಯಾಕೋ ಕಿಚ್ಚ ಈ ವಾರ ಏಕಪಕ್ಷೀಯವಾಗಿ ಮಾತನಾಡಿದಂತಿತ್ತು ಎಂದು ತಗಾದೆ ತೆಗೆದಿದ್ದಾರೆ.
ಜಗದೀಶ್ ಶೋ ವಿರುದ್ಧ ಕೋರ್ಟ್ ಗೆ ಹೋಗಬಹುದು ಎಂಬ ಭಯಕ್ಕೆ ಕಿಚ್ಚನ ಕೈಯಲ್ಲಿ ವಾಹಿನಿಯವರೇ ಇಂತಹ ಮಾತುಗಳನ್ನು ಆಡಿಸಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ. ಅತ್ತ ಮನೆಯವರಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದ ಕಿಚ್ಚ ಸುದೀಪ್, ಕೊನೆಗೆ ಜಗದೀಶ್ ಗೆ ವಿಡಿಯೋ ಕಾಲ್ ಮಾತನಾಡುವಾಗ ಮೃದುವಾಗಿ ಮಾತನಾಡಿದ್ದೂ ಇತರೆ ಸ್ಪರ್ಧಿಗಳ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.