ಬೆಂಗಳೂರು: ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿ ಕಿಚ್ಚ ಸುದೀಪ್ ಟ್ವೀಟ್ ಮಾಡಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಈ ವಾರಂತ್ಯದ ಅಗ್ರೆಸಿವ್ ಎಪಿಸೋಡ್ ಶೂಟಿಂಗ್ ಮಾಡುವಾಗ ಎಂಥಾ ಪರಿಸ್ಥಿತಿಯಲ್ಲಿದ್ದರು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಈ ವಾರಂತ್ಯದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಪ್ರತಿಯೊಬ್ಬ ಸದಸ್ಯರನ್ನೂ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದರು. ಅವರ ನಡವಳಿಕೆ ಬಗ್ಗೆ, ಪ್ರಾಮಾಣಿಕತೆ ಬಗ್ಗೆ ಬುಲೆಟ್ ನಂತೆ ಪ್ರಶ್ನೆ ಮಾಡುತ್ತಿದ್ದರೆ ಸ್ಪರ್ಧಿಗಳು ಮಾತೇ ಮರೆತು ಕೂತಿದ್ದರು. ಕಿಚ್ಚ ಸುದೀಪ್ ಈ ವಾರಂತ್ಯದ ಎಪಿಸೋಡ್ ನಲ್ಲಿ ಕೋಪಗೊಂಡಿದ್ದನ್ನು ಅವರ ಪ್ರತೀ ಮಾತಿನಲ್ಲಿ, ಹಾವ ಭಾವದಲ್ಲಿ ನೋಡಬಹುದಿತ್ತು.
ಆದರೆ ಅವರು ಈ ಎಪಿಸೋಡ್ ಶೂಟ್ ಮಾಡುವಾಗಲೇ ತಮ್ಮ ಅಮ್ಮನ ಆರೋಗ್ಯದ ಬಗ್ಗೆ ತಿಳಿದುಬಂದಿತ್ತು ಎಂದಿದ್ದಾರೆ. ಈ ಬಗ್ಗೆ ಸುದೀರ್ಘ ಟ್ವೀಟ್ ಮಾಡಿರುವ ಅವರು ತಮ್ಮ ಅಂದಿನ ಮಾನಸಿಕ ಸ್ಥಿತಿಗತಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನು ಓದಿದ ಮೇಲೆ ಅವರು ಯಾವ ಮನಸ್ಥಿತಿಯಲ್ಲಿ ಅಂತಹದ್ದೊಂದು ಎಪಿಸೋಡ್ ಶೂಟ್ ಮಾಡಿದರು ಎಂಬುದನ್ನು ಅರಿತರೆ ನಿಮ್ಮ ಕಣ್ಣಂಚಲ್ಲೂ ನೀರುಬರಬಹುದು.
ಪ್ರತಿನಿತ್ಯ ನನಗೆ 5.30 ಕ್ಕೆ ಅಮ್ಮನಿಂದ ಗುಡ್ ಮಾರ್ನಿಂಗ್ ಮೆಸೇಜ್ ಬರುತ್ತಿತ್ತು. ಆದರೆ ಶುಕ್ರವಾರವೇ ಅದು ಕೊನೆ. ಶನಿವಾರ ಬಿಗ್ ಬಾಸ್ ಮನೆಯಲ್ಲಿದ್ದಾಗ ನನಗೆ ಮೆಸೇಜ್ ಬಂದಿರಲಿಲ್ಲ. ಹೀಗಾಗಿ ನಾನು ಅಮ್ಮನಿಗೆ ಕರೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಶನಿವಾರದ ಎಪಿಸೋಡ್ ಶೂಟಿಂಗ್ ಬ್ಯುಸಿಯ ನಡುವೆ ನನಗೆ ಕರೆ ಮಾಡಲೂ ಸಮಯ ಸಿಗಲಿಲ್ಲ. ನಾನು ವೇದಿಕೆಗೆ ಹೋಗಲು ಕೆಲವೇ ಸೆಕೆಂಡುಗಳ ಮೊದಲು ನನ್ನ ಅಮ್ಮನ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಯಿತು. ತಕ್ಷಣವೇ ನಾನು ಅಮ್ಮನ ಜೊತೆಗಿದ್ದ ಸಹೋದರಿಗೆ ಕರೆ ಮಾಡಿ ಡಾಕ್ಟರ್ ಬಳಿಯೂ ಮಾತನಾಡಿ ವೇದಿಕೆಗೆ ಹೋದೆ. ಕೆಲವು ಕ್ಷಣಗಳ ನಂತರ ನನ್ನ ಆಪ್ತರಿಗೆ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಮೆಸೇಜ್ ಬಂತು. ಅದೇ ಮೊದಲ ಬಾರಿಗೆ ನಾನು ಅಸಹಾಯಕ ಎನಿಸಿದ ಕ್ಷಣವಾಗಿತ್ತು. ಸಾಕಷ್ಟು ಸಂದಿಗ್ಧತೆಯ ನಡುವೆ ಶನಿವಾರದ ಎಪಿಸೋಡ್ ನಲ್ಲಿ ನಾನು ಮಾತನಾಡಿದೆ. ನನ್ನ ಮನಸ್ಸಿನ ತುಂಬಾ ಅಮ್ಮನೇ ಇದ್ದರು. ಹಾಗಿದ್ದರೂ ನಾನು ಆ ಎಪಿಸೋಡ್ ನಲ್ಲಿ ಶಾಂತವಾಗಿ ನಿಭಾಯಿಸಿದೆ ಎಂದರೆ ಅದಕ್ಕೆ ನನ್ನ ಅಮ್ಮನ ಶಕ್ತಿಯೇ ಕಾರಣ.
ಎಪಿಸೋಡ್ ಶೂಟ್ ಆದ ತಕ್ಷಣ ನಾನು ಅಮ್ಮನನ್ನು ನೋಡಲು ಹೋದೆ. ಆಗ ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆಕೆ ಪ್ರಜ್ಞಾವಸ್ಥೆಯಲ್ಲಿದ್ದಾಗ ನಾನು ಅವಳನ್ನು ನೋಡಲು ಆಗಲೇ ಇಲ್ಲ. ಆಕೆ ಸಾಕಷ್ಟು ಹೋರಾಟ ಮಾಡಿದಳು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಯಿತು. ನನಗೆ ಇದರಿಂದ ಹೇಗೆ ಹೊರಬರಲಿ ಎಂದು ಗೊತ್ತಿಲ್ಲ. ನನ್ನ ಅಮ್ಮನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.