Publish Date: Fri, 18 Oct 2024 (10:27 IST)
Updated Date: Fri, 18 Oct 2024 (10:30 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಆಗಬಾರದ ಘಟನೆಯೊಂದು ನಡೆದು ಹೋಗಿದೆ. ವಾರದ ಮಧ್ಯದಲ್ಲಿ ಪರಸ್ಪರ ಕಿತ್ತಾಟ ಮಾಡಿಕೊಂಡ ಲಾಯರ್ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ.
ಮೊನ್ನೆಯೇ ಬಿಗ್ ಬಾಸ್ ಮನೆಯಿಂದ ಇಬ್ಬರು ಹೊರಹೋದ ಸುದ್ದಿ ಔಟ್ ಆಗಿತ್ತು. ಇಂದಿನ ಎಪಿಸೋಡ್ ನಲ್ಲಿ ಇದು ಖಚಿತವಾಗಲಿದೆ. ಈ ಬಗ್ಗೆ ಕಲರ್ಸ್ ವಾಹಿನಿ ಈಗಾಗಲೇ ಪ್ರೋಮೋ ಹರಿಯಬಿಟ್ಟಿದೆ. ಹಂಸ ವಿಚಾರಕ್ಕೆ ಜಗದೀಶ್ ವಿರುದ್ಧ ಮನೆಯವರೆಲ್ಲರೂ ತಿರುಗಿಬಿದ್ದಿದ್ದರು.
ನಿನ್ನೆಯ ಎಪಿಸೋಡ್ ನಲ್ಲಿ ಜಗದೀಶ್ ಮತ್ತು ಸುರೇಶ್ ನಡುವೆ ಮೊದಲು ವಾಗ್ವಾದ ಶುರುವಾಗಿತ್ತು. ಹಂಸ ಬಗ್ಗೆ ಜಗದೀಶ್ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಸುರೇಶ್ ನನ್ನ ಬಳಿ ಹೆಣ್ಣು ಮಕ್ಕಳ ಬಗ್ಗೆ ಆ ರೀತಿ ಮಾತನಾಡಬೇಡಿ ಎಂದಿದ್ದರು. ಅಲ್ಲಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಇಡೀ ಮನೆಯೇ ಹತ್ತಿ ಉರಿಯುವಂತೆ ಮಾಡಿದೆ.
ಮನೆಯವರೆಲ್ಲರೂ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ತೀರಾ ವೈಯಕ್ತಿಕ ಮಟ್ಟಕ್ಕೆ ಪದ ಪ್ರಯೋಗಗಳು, ಟೀಕೆಗಳೂ ಬಂತು. ಚೈತ್ರಾರನ್ನು ಜಗದೀಶ್ ರೋಲ್ ಕಾಲ್ ಎಂದರೆ ಜಗದೀಶ್ ಗೆ ಲಾಯರ್ ಲೈಸೆನ್ಸೇ ಇಲ್ಲ ಎಂದು ಚೈತ್ರಾ ಕೂಗಾಡಿದರು. ಮಾನಸಾ, ಭವ್ಯಾ ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳು ಕಿತ್ತಾಟಕ್ಕಿಳಿದಾಗ ಮನೆಯ ಉಳಿದ ಗಂಡು ಮಕ್ಕಳು ಬೆಂಬಲವಾಗಿ ನಿಂತರು. ಈ ವೇಳೆ ಹೆಣ್ಣು ಮಕ್ಕಳ ಮೈಮೇಲೆ ಬೀಳಲು ಹೋಗುತ್ತಿದ್ದ ಜಗದೀಶ್ ರನ್ನು ರಂಜಿತ್ ತಳ್ಳಿದರು. ಇಬ್ಬರ ನಡುವೆ ತಳ್ಳಾಟವೂ ನಡೆದಿದೆ.
ಈ ಬಗ್ಗೆ ಬಿಗ್ ಬಾಸ್ ಎಲ್ಲರ ಅಭಿಪ್ರಾಯವನ್ನು ಮತ್ತು ನಡೆದ ಘಟನೆಯನ್ನು ಸ್ಪರ್ಧಿಗಳ ಬಾಯಿಯಿಂದಲೇ ಕೇಳಿದರು. ಬಳಿಕ ಬಿಗ್ ಬಾಸ್ ತೀರ್ಪು ನೀಡಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಗೌರವವಾಗಿ ನಡೆದುಕೊಂಡಿದ್ದಕ್ಕೆ ಜಗದೀಶ್ ಅವರನ್ನು ಮತ್ತು ದೈಹಿಕವಾಗಿ ತಳ್ಳಾಟ ಮಾಡಿದ್ದಕ್ಕೆ ರಂಜಿತ್ ರನ್ನು ಮನೆಯಿಂದ ಹೊರಹಾಕಲಾಗಿದೆ.