Publish Date: Fri, 18 Oct 2024 (09:22 IST)
Updated Date: Fri, 18 Oct 2024 (09:24 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಮುಂದಿನ ವರ್ಷದಿಂದ ಹೋಸ್ಟ್ ಆಗಿ ನಾನು ಇರಲ್ಲ ಎಂದು ಕಿಚ್ಚ ಸುದೀಪ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಅವರ ಸ್ಥಾನಕ್ಕೆ ಯಾರು ಬರಬಹುದು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.
ಕಿಚ್ಚ ಸುದೀಪ್ ಕಂಚಿನ ಕಂಠ, ಅವರ ಗತ್ತಿಗೆ ಸರಿ ಸಾಠಿಯಾಗುವಂತಹ ನಿರೂಪಕರನ್ನೇ ಕಲರ್ಸ್ ತರಬೇಕಿದೆ. ಇಲ್ಲದೇ ಹೋದರೆ ಬಿಗ್ ಬಾಸ್ ನಿರೂಪಣೆ ಸಪ್ಪೆಯಾಗಲಿದೆ. ಹೀಗಾಗಿ ಅವರಷ್ಟೇ ಸ್ಟಾರ್ ವಾಲ್ಯೂ ಇರುವ ವ್ಯಕ್ತಿಗಳನ್ನೇ ಕಲರ್ಸ್ ಹುಡುಕಬೇಕಾಗುತ್ತದೆ. ಈ ನಡುವೆ ಅಭಿಮಾನಿಗಳು ಒಂದು ಸಲಹೆ ನೀಡುತ್ತಿದ್ದಾರೆ.
ಕಿಚ್ಚ ಸುದೀಪ್ ಸ್ಥಾನ ತುಂಬಬೇಕೆಂದರೆ ಬಿಗ್ ಬಾಸ್ ನಿರೂಪಣೆಗೆ ಶಿವರಾಜ್ ಕುಮಾರ್ ಅವರೇ ಸರಿ ಎನ್ನುತ್ತಿದ್ದಾರೆ. ಕಿಚ್ಚ ಸುದೀಪ್ ರಂತೇ ಶಿವಣ್ಣ ಎದುರು ನಿಂತು ಘರ್ಜಿಸಿದರೆ ಎದುರಾಳಿಗಳು ಸೈಲೆಂಟ್ ಆಗಲೇಬೇಕು. ಇಡೀ ಕನ್ನಡ ಇಂಡಸ್ಟ್ರಿಗೇ ಅಣ್ಣನಂತಿರುವ ಶಿವಣ್ಣನೇ ಬಿಗ್ ಬಾಸ್ ನಿರೂಪಣೆಗೆ ಸರಿಯಾದ ವ್ಯಕ್ತಿ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ಶಿವಣ್ಣ ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡಿಕೆಡಿ ಶೋ ತೀರ್ಪುಗಾರರಾಗಿದ್ದಾರೆ. ಕಿರುತೆರೆಯಲ್ಲಿ ಕೆಲವೊಂದು ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕಿರುತೆರೆ ಹೊಸದೇನಲ್ಲ. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರೇ ಮುಂದಿನ ಆವೃತ್ತಿಯಿಂದ ಬಿಗ್ ಬಾಸ್ ನಿರೂಪಣೆ ಮಾಡಿದರೂ ಅಚ್ಚರಿಯಿಲ್ಲ.