Select Your Language

Notifications

webdunia
webdunia
webdunia
webdunia

ಅನಿರುದ್ಧ್ ಗೆ ತಗುಲಿದ ಬ್ಯಾನ್ ಬಿಸಿ: ಡಾ.ರಾಜ್ ಮಾತು ಪಾಲಿಸುತ್ತಾ ಚಿತ್ರರಂಗ?

ಅನಿರುದ್ಧ್ ಗೆ ತಗುಲಿದ ಬ್ಯಾನ್ ಬಿಸಿ: ಡಾ.ರಾಜ್ ಮಾತು ಪಾಲಿಸುತ್ತಾ ಚಿತ್ರರಂಗ?
ಬೆಂಗಳೂರು , ಶುಕ್ರವಾರ, 9 ಡಿಸೆಂಬರ್ 2022 (16:36 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ತಂಡದಲ್ಲಿ ಕಿರಿಕ್ ಆಗಿ ಧಾರವಾಹಿಯಿಂದ ಹೊರಬಿದ್ದ ಬಳಿಕ ನಟ ಅನಿರುದ್ಧ್ ಜತ್ಕಾರ್ ಗೆ ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ನಿಷೇಧ ಹಾಕಿತ್ತು.

ಅದರ ಬೆನ್ನಲ್ಲೇ ಅನಿರುದ್ಧ್ ಈಗ ಉದಯ ವಾಹಿನಿಯಲ್ಲಿ ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದಲ್ಲಿ ಸೂರ್ಯವಂಶ ಧಾರವಾಹಿಯಲ್ಲಿ ನಟಿಸುತ್ತಿರುವುದಾಗಿ ಸುದ್ದಿಕೊಟ್ಟಿದ್ದಾರೆ. ಇದು ಕಿರುತೆರೆ ನಿರ್ಮಾಪಕರ ಕಣ್ಣು ಕೆಂಪು ಮಾಡಿದೆ.

ಇದೇ ವಿಚಾರವನ್ನಿಟ್ಟುಕೊಂಡು ಎಸ್.ನಾರಾಯಣ್ ಅವರನ್ನು ಭೇಟಿ ಮಾಡಿದ ನಿರ್ಮಾಪಕರ ಸಂಘದ ಸದಸ್ಯರು ಅನಿರುದ್ಧ್ ಗೆ ಅವಕಾಶ ಕೊಡಬಾರದು, ನಮ್ಮ ನಿರ್ಧಾರವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದೆ. ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ಭಾ.ಮಾ. ಹರೀಶ್ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.

ತಮ್ಮನ್ನು ನಿರ್ಮಾಪಕರ ಸಂಘ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿರುವ ಎಸ್.ನಾರಾಯಣ್ ‘ವಿಷ್ಣುವರ್ಧನ್ ಅಳಿಯನಾಗಿ ಅನಿರುದ್ಧ್ ಅಂತಹ ಕೆಲಸ ಮಾಡಿರಲ್ಲ ಎನ್ನುವುದು ನನ್ನ ನಂಬಿಕೆ. ಸೂರ್ಯವಂಶ ಎಂಬ ಕತೆಗೆ ಅನಿರುದ್ಧ್ ಬೇಕೇ ಬೇಕು. ನಿರ್ಮಾಪಕರು ನಮ್ಮ ಅನ್ನದಾತರು. ಆದರೆ ಬ್ಯಾನ್ ಎನ್ನುವ ಪದ ಯಾವುದಕ್ಕೂ ಪರಿಹಾರ ಅಲ್ಲ. ಅಣ್ಣಾವ್ರು ಈಗಾಗಲೇ ಬ್ಯಾನ್ ಎನ್ನುವ ಪದ ನಮ್ಮಲ್ಲಿ ಬರಬಾರದು ಎಂದಿದ್ದರು. ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿದರೆ ಎಲ್ಲದಕ್ಕೂ ಪರಿಹಾರವಿದೆ. ಒಂದು ನಿಮ್ಮ ಧಾರವಾಹಿಯಲ್ಲಿ ನಟಿಸುವ ಕಲಾವಿದ ನಿಮಗೆ ಬೇಕಾದಂತೆ ನಟಿಸುತ್ತಿಲ್ಲ, ನಿಮ್ಮ ಕತೆಯ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದಾದರೆ ನೀವು ಆತನನ್ನು ತೆಗೆದು ಹಾಕಲು ಅವಕಾಶವಿದೆ. ಆದರೆ ಬೇರೆ ಧಾರವಾಹಿ ತಂಡದಲ್ಲೂ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ‍್ಯವಿಲ್ಲ’ ಎಂದಿದ್ದಾರೆ.

ಡಾ.ರಾಜ್ ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎಂದು ಕರೆದಿದ್ದರು. ಅದೇ ರೀತಿ ಕಲಾವಿದರನ್ನು ನಿಷೇಧ ಮಾಡುವಂತಹ ಹೀನ ಕೆಲಸ ಮಾಡಬಾರದು ಎಂದಿದ್ದರು. ಹೀಗಾಗಿ ಚಿತ್ರರಂಗದ ಹಿರಿಯರು ಅಣ್ಣಾವ್ರ ಮಾತನ್ನು ಪಾಲಿಸುತ್ತಾರಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ನೋಡಿ ತಂಡಕ್ಕೆ ಮೆಸೇಜ್ ಕಳುಹಿಸಿದ್ದೇನೆ: ರಶ್ಮಿಕಾ ಮಂದಣ್ಣ