ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿ ಈಗ ರೋಚಕ ತಿರುವಿನತ್ತ ಸಾಗಿದೆ. ಇಂತಹದ್ದೊಂದು ಟ್ವಿಸ್ಟ್ ಯಾರೂ ನಿರೀಕ್ಷಿಸಿರಲಿಲ್ಲ. ಕನ್ನಡದ ಮಟ್ಟಿಗೆ ಇಂತಹದ್ದೊಂದು ನಡೆಯುತ್ತಿರುವುದು ಅಪರೂಪ.
ರಾಜೇಶ್ ನಟರಂಗ, ಛಾಯಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಈಗ ಹೊಸ ತಿರುವು ಸಿಕ್ಕಿದೆ. ನಾಯಕಿ ಭೂಮಿಕಾಗೆ ತನಗೆ ಹುಟ್ಟಿದ್ದು ಎರಡು ಮಗು ಎಂದು ವಿಲನ್ ಶಾಕುಂತಲಾಳಿಂದ ಗೊತ್ತಾಗಿದೆ. ಒಂದು ಮಗುವನ್ನು ನಾನೇ ಕೊಂದಿದ್ದು, ಇನ್ನೊಂದನ್ನೂ ಕೊಲೆ ಮಾಡುತ್ತೇನೆ ಎಂದು ಶಾಕುಂತಲಾ ಬೆದರಿಕೆ ಹಾಕುತ್ತಾಳೆ. ಇದಕ್ಕೆ ಹೆದರಿ ಭೂಮಿಕಾ ಮಗು ಸಮೇತ ಮನೆ ಬಿಟ್ಟು ಹೋಗುತ್ತಾಳೆ.
ಆದರೆ ಶಾಕುಂತಲಾ ನಿಜ ಬಣ್ಣ ಗೌತಮ್ ಮುಂದೆ ಬಯಲಾಗುತ್ತದೆ. ಹೀಗಾಗಿ ಎಲ್ಲಾ ಐಶ್ವರ್ಯ ಬಿಟ್ಟು ತನ್ನ ಅಮ್ಮನ ಜೊತೆ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರಡುತ್ತಾನೆ. ಇದಾದ ಬಳಿಕ ಐದು ವರ್ಷಗಳ ನಂತರ ಭೂಮಿಕಾ-ಗೌತಮ್ ಬದುಕಿನ ಕತೆ ತೋರಿಸಲಾಗುತ್ತಿದೆ. ಗೌತಮ್ ಮಗ ಈಗಾಗಲೇ ದೊಡ್ಡವನಾಗಿದ್ದಾನೆ. ಗೌತಮ್ ಒಬ್ಬ ಸಾಮಾನ್ಯ ಡ್ರೈವರ್ ಆಗಿ ತನ್ನ ಮಗ, ಪತ್ನಿಯ ಹುಡುಕಾಟದಲ್ಲಿದ್ದಾನೆ.
ವಿಶೇಷವೆಂದರೆ ಗೌತಮ್ ಮಗನ ಪಾತ್ರದಲ್ಲಿ ನಟಿಸುತ್ತಿರುವುದು ಈಗ ಧಾರವಾಹಿಯಲ್ಲಿ ಸ್ನೇಹಿತನ ಪಾತ್ರ ಮಾಡುತ್ತಿರುವ ಆನಂದ್ ಅವರ ರಿಯಲ್ ಲೈಫ್ ಮಗ ದುಶ್ಯಂತ್. ಇಂತಹದ್ದೊಂದು ರೋಚಕ ತಿರುವಿನ ಪ್ರೋಮೋ ನೋಡಿ ಅಭಿಮಾನಿಗಳೇ ದಂಗಾಗಿದ್ದಾರೆ. ಕನ್ನಡದಲ್ಲಿ ಇಂತಹ ಪ್ರಯೋಗಕ್ಕೆ ಧಾರವಾಹಿಗಳು ಮುಂದಾಗುವುದು ಅಪರೂಪ. ಕೆಲವೇ ಧಾರವಾಹಿಗಳಲ್ಲಿ ಮಾತ್ರ ಈ ರೀತಿ ಕೆಲವು ವರ್ಷಗಳ ನಂತರದ ಕತೆಯನ್ನು ಅದೇ ಕಲಾವಿದರನ್ನು ಇಟ್ಟುಕೊಂಡು ತೋರಿಸುತ್ತಾರೆ.