Publish Date: Thu, 26 Aug 2021 (17:24 IST)
Updated Date: Thu, 26 Aug 2021 (17:26 IST)
ಬೆಂಗಳೂರು: ಫೈಟರ್ ವಿವೇಕ್ ಸಾವಿಗೆ ಸಂಬಂಧಪಟ್ಟಂತೆ ನಟ ಅಜೇಯ್ ರಾವ್ ಇಂದು ಪೊಲೀಸ್ ವಿಚಾರಣೆಗೆ ಬಿಡದಿ ಠಾಣೆಗೆ ಬಂದಿದ್ದಾರೆ.
ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಅಜೇಯ್ ರಾವ್ ಕೂಡಾ ಶೂಟಿಂಗ್ ಸ್ಥಳದಲ್ಲಿದ್ದರು. ಹೀಗಾಗಿ ಪೊಲೀಸರು ಅವರನ್ನೂ ವಿಚಾರಣೆಗೆ ಕರೆಸಿದ್ದಾರೆ.
ನಿನ್ನೆ ನಟಿ ರಚಿತಾ ರಾಂ ಅವರನ್ನೂ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇಂದು ಅಜೇಯ್ ರಾವ್ ರನ್ನು ಕರೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಬಂದರೆ ಮತ್ತೆ ವಿಚಾರಣೆಗೆ ಹಾಜರಾಗುವುದಾಗಿ ಅಜೇಯ್ ರಾವ್ ಹೇಳಿದ್ದಾರೆ.
ಇನ್ನು, ತಾವು ಸಹಾಯ ಮಾಡಿಲ್ಲ ಎಂದು ಆರೋಪ ಮಾಡಿರುವವರಿಗೆ ತಿರುಗೇಟು ಕೊಟ್ಟಿರುವ ಅಜೇಯ್ ರಾವ್, ನಾನು ಹೆದರಿ ಓಡುವವನಲ್ಲ. ನನ್ನ ಬಗ್ಗೆ ಹೀಗೆ ಇಲ್ಲಸಲ್ಲದ ಆರೋಪ ಮಾಡಿದರೆ ನನ್ನ ಮೇಲೆ ಇನ್ ವೆಸ್ಟ್ ಮಾಡಿದ ಬೇರೆ ಇನ್ ವೆಸ್ಟರ್ ಗಳಿಗೂ ಭಯವಾಗುತ್ತದೆ. ಹೀಗಾಗಿ ನಾನು ಮುನ್ನೆಚ್ಚರಿಕಾ ಕ್ರಮವಾಗಿ ಜಾಮೀನಿಗೆ ಅರ್ಜಿ ಹಾಕಿದ್ದೆ. ಅದರ ಅರ್ಥ ನಾನು ಭಯಗೊಂಡು ತಲೆಮರೆಸಿಕೊಂಡು ಓಡಿ ಹೋಗಿಲ್ಲ. ಇದರಲ್ಲಿ ನನ್ನ ತಪ್ಪಿಲ್ಲ ಎಂದಿದ್ದಾರೆ.