ಬೆಂಗಳೂರು(ಆ.26):ಈ ಹಿಂದೆ ನಟ ದೊಡ್ಡಣ್ಣ ಬಗ್ಗೆ ಅನೇಕ ಊಹಾಪೋಹಾಗಳು ಹಬ್ಬಿದ್ದವು. ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಹಿರಿಯ ನಟ ದೊಡ್ಡಣ್ಣನವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭಿಸಿದೆ. ನಟ ದೊಡ್ಡಣ್ಣ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆಯಲು ಬುಧವಾರ ಬೆಳಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೃದಯ ಬಡಿತ ದರ(ಹಾರ್ಟ್ ಬೀಟ್ ರೇಟ್) ಕಡಿಮೆಯಾದ ಹಿನ್ನೆಲೆ, ನಟ ದೊಡ್ಡಣ್ಣಗೆ ಹಾರ್ಟ್ ಪೇಸ್ ಮೇಕರ್ ಚಿಕತ್ಸೆ ಮಾಡಲಾಗುತ್ತಿದೆ. ಇನ್ನೂ ಮೂರು ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಜಯದೇವ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.