ಮುಂಬೈ: ಕೆಜಿಎಫ್ 2 ಸೇರಿದಂತೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಯಶಸ್ವಿಯಾಗುತ್ತಿರುವ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಹಿಂದಿ ಈಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಬಾಲಿವುಡ್ ನಟ ಅಜಯ್ ದೇವಗನ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಅಜಯ್ ದೇವಗನ್, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲದೇ ಹೋದರೆ ನಿಮ್ಮ ಸಿನಿಮಾಗಳನ್ನು ಹಿಂದಿಯಲ್ಲಿ ಯಾಕೆ ಡಬ್ ಮಾಡ್ತೀರಿ? ಹಿಂದಿ ಈ ಮೊದಲೂ, ಈಗಲೂ ಮತ್ತು ಮುಂದೆಯೂ ರಾಷ್ಟ್ರೀಯ ಭಾಷೆಯಾಗಿಯೇ ಉಳಿಯಲಿದೆ ಎಂದು ಖಾರವಾಗಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ನಾನು ಹೇಳಿದ ಸಂದರ್ಭ ಏನು ಎಂಬುದು ಬಹುಶಃ ನಿಮಗೆ ತಿಳಿದಂತೆ ಅನಿಸುತ್ತಿಲ್ಲ. ಈ ಹೇಳಿಕೆ ಯಾಕೆ ಕೊಟ್ಟೆ ಎಂಬುದನ್ನು ನಿಮ್ಮನ್ನು ಭೇಟಿಯಾದಾಗ ತಿಳಿಸುವೆ. ಯಾರಿಗೂ ನೋವುಂಟು ಮಾಡಲು, ವಾದಕ್ಕೆ ನಾಂದಿ ಹಾಡಲು ಈ ಹೇಳಿಕೆ ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಜಯ್ ದೇವಗನ್ ಕಿಚ್ಚ ಸುದೀಪ್ ನೀವು ನನ್ನ ಗೆಳೆಯ. ಅಪಾರ್ಥ ಸರಿಪಡಿಸಿದ್ದಕ್ಕೆ ಧನ್ಯವಾದಗಳು. ಎಲ್ಲಾ ಭಾಷೆಯೂ ಒಂದೇ ಎಂದು ನಾನು ನಂಬುತ್ತೇನೆ. ಬಹುಶಃ ಭಾಷಾಂತರಿಸುವಾಗ ಏನಾದರೂ ಮಿಸ್ ಆಗಿರಬೇಕು ಎಂದಿದ್ದಾರೆ.