Publish Date: Sun, 21 Mar 2021 (09:37 IST)
Updated Date: Sun, 21 Mar 2021 (09:40 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನಗೆ ಕೊಲೆ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಆರೋಪ ಮಾಡಿದ್ದ ಬರಹಗಾರ ಅಹೋರಾತ್ರ ಮೇಲೆ ಸಿಟ್ಟಿಗೆದ್ದ ಕಿಚ್ಚನ ಅಭಿಮಾನಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಕಿಚ್ಚ ಸುದೀಪ್ ಆನ್ ಲೈನ್ ಜೂಜಾಟ ರಮ್ಮಿ ಸರ್ಕಲ್ ಗೆ ರಾಯಭಾರಿಯಾಗಿರುವುದರ ವಿರುದ್ಧ ಅಹೋರಾತ್ರ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಾಚಮಗೋಚರವಾಗಿ ಟೀಕಿಸುತ್ತಿದ್ದರು. ಇದು ಕಿಚ್ಚನ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು.
ಇದರ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದ ಅಹೋರಾತ್ರ ಕಿಚ್ಚ ಸುದೀಪ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಲ್ಲದೆ, ಅವರು ತಮ್ಮ ಆಪ್ತರ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದು ಕಿಚ್ಚನ ಅಭಿಮಾನಿಗಳ ಸಿಟ್ಟು ಮಿತಿಮೀರುವಂತೆ ಮಾಡಿತ್ತು.
ತಮ್ಮ ಮೆಚ್ಚಿನ ಸ್ಟಾರ್ ನಟನ ಬಗ್ಗೆ ಸುಖಾ ಸುಮ್ಮನೇ ಆರೋಪ ಮಾಡುತ್ತಿರುವ ಅಹೋರಾತ್ರ ಮನೆಗೆ ನುಗ್ಗಿದ ಕಿಚ್ಚ ಅಭಿಮಾನಿಗಳು ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.