Photo Courtesy: Instagram
ಬೆಂಗಳೂರು: ಅಪ್ಪಟ ಕನ್ನಡ ನಟಿ, ಅದಿತಿ ಪ್ರಭುದೇವ ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ತಾವು ಗರ್ಭಿಣಿ ಎನ್ನುವ ವಿಚಾರವನ್ನು ಹೊರಹಾಕಿದ್ದರು.
ಇದೀಗ ಅದಿತಿ ಕೊನೆಗೂ ತನ್ನ ಬಯಕೆ ಈಡೇರಿದೆ ಎಂದು ಪತಿ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದಿತಿ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತ್ತು. ಇದಕ್ಕೆ ಸಿನಿ ಸ್ನೇಹಿತರೂ ಆಗಮಿಸಿದ್ದರು.
ಇದೀಗ ಅದಿತಿ ಬೇಬಿ ಬಂಪ್ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಅವರ ಬಹುದಿನದ ಆಸೆಯಾಗಿತ್ತಂತೆ. ಅದನ್ನೀಗ ಗಂಡ ಯಶಸ್ ನೆರವೇರಿಸಿದ್ದಾರೆ. ಗಂಡನ ಜೊತೆಗೆ ಹೊಟ್ಟೆಯಲ್ಲಿ ಮುದ್ದು ಮಗುವನ್ನು ಹೊತ್ತುಕೊಂಡು ಅದಿತಿ ಸಾಂಪ್ರದಾಯಿಕವಾಗಿ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಟಿಮಣಿಯರು ಮಾಡರ್ನ್ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಅದಿತಿ ಪಕ್ಕಾ ಕನ್ನಡದ ಹುಡುಗಿಯಂತೆ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ.
2022 ರಲ್ಲಿ ಅದಿತಿ ಮತ್ತು ಉದ್ಯಮಿ ಯಶಸ್ ಪಾಟ್ಲಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರದ್ದು ಒಂದು ರೀತಿಯಲ್ಲಿ ಅರೇಂಜ್ಡ್ ಕಮ್ ಲವ್ ಮ್ಯಾರೇಜ್. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜನವರಿಯಲ್ಲಿ ಈ ಸಿಹಿ ಸುದ್ದಿಯನ್ನು ಅದಿತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದರು.