ಬೆಂಗಳೂರು: ಬಹುಭಾಷಾ ನಟಿ ಖುಷ್ಮೂ ಸುಂದರ್ ಅವರು ತಮ್ಮ ಮೊದಲ ಕನ್ನಡ ಸಿನಿಮಾದ ಸಂದರ್ಭದಲ್ಲಿ ವಿ ರವಿಚಂದ್ರನ್ ಹಾಗೂ ಅವರ ತಂದೆ ಮಾಡಿದ ಸಹಾಯದ ಬಗ್ಗೆ ಈಚೆಗೆ ಹೇಳಿಕೊಂಡಿದ್ದರು. ಆ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖುಷ್ಬೂ ಅವರು ಅಂಜದ ಗಂಡು ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಹಲವು ಕನ್ನಡದ ಮೇರು ನಟರ ಜತೆ ಖುಷ್ಮೂ ಅವರು ನಟಿಸಿದರು.
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಚಂದ್ರನ್ ಹಾಗೂ ಅವರ ತಂದೆಯ ಸಹಾಯವನ್ನು ನೆನೆದು, ಅದನ್ನು ಜೀವನದಲ್ಲಿ ಯಾವತ್ತೂ ಮರೆಯಲೂ ಸಾಧ್ಯವಿಲ್ಲ ಎಂದು ಖುಷ್ಬೂ ಹೇಳಿದ್ದಾರೆ.
ವಿಡಿಯೋದಲ್ಲಿ: ನಾನು ಕನ್ನಡಕ್ಕೆ ಅಂಜದ ಗಂಡು ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದೆ. ಈ ವೇಳೆ ನನಗೆ 17 ವರ್ಷ ವಯಸ್ಸು. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನನ್ನ ತಾಯಿ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. ಈ ವೇಳೆ ಆಸ್ಪತ್ರೆ ಬಿಲ್ ₹36 ಸಾವಿರ ಆಗಿತ್ತು. ಅದನ್ನು ಹೊಂದಿಸಲು ನನಗೆ ಕಷ್ಟವಾಯಿತು, ಅದಲ್ಲದೆ ನಾನು ಶೂಟಿಂಗ್‌ನಲ್ಲಿದ್ದೆ. ನಾನು ಸೆಟ್‌ನಲ್ಲಿ ಮಂಕಾಗಿರುವುದನ್ನು ನೋಡಿ ಸಿನಿಮಾದ ನಟ ರವಿಚಂದ್ರನ್ ಅವರು ನನ್ನ ಸ್ಟಾಪ್ ಬಳಿ ವಿಚಾರಿಸಿದರು. ಈ ವಿಚಾರ ಅವರ ತಂದೆ, ಸಿನಿಮಾದ ನಿರ್ಮಾಪಕ ಎನ್ ವೀರಸ್ವಾಮಿ ಅವರಿಗೂ ಗೊತ್ತಾಯಿತು. ಆ ಸಂದರ್ಭದಲ್ಲಿ ಅವರೂ ನನಗೆ ಯಾವುದೇ ಮಾಹಿತಿ ನೀಡಿದೆ, ಸ್ವತಃ ಆಸ್ಪತ್ರೆಗೆ ಹೋಗಿ, ಬಿಲ್ ಕಟ್ಟಿ ಅಮ್ಮನನ್ನು ಡಿಸ್ಚಾರ್ಜ್ ಮಾಡಿ, ಮನೆಗೆ ಕರೆದುಕೊಂಡರು.
ಆಮೇಲೆ ಬಂದು ನೀನು ಯಾಕೆ ಈ ವಿಚಾರವನ್ನು ನನ್ನ ಬಳಿ ಹೇಳಲಿಲ್ಲ ಎಂದು ಅವರು ಕೇಳಿದರು. ನನಗೆ ಆಗಾ 17 ವರ್ಷ, ಈ ವಿಷಯವನ್ನು ನಾನು ಹೇಗೆ ಅವರ ಬಳಿ ಚರ್ಚಿಸುವುದು ಎಂದು ಗೊತ್ತಾಗಲಿಲ್ಲ. ಆದರೆ ಅವರು ಮಾಡಿದ ಉಪಕಾರ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದರು.
ಖುಷ್ಬೂ ಹಾಗೂ ರವಿಚಂದ್ರನ್ ಅವರು ಇಂದಿಗೂ ಕೂಡಾ ಉತ್ತಮ ಸ್ನೇಹಿತರಾಗಿದ್ದಾರೆ.