ನಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಇಲಾಖೆಗಳ ನಡೆಗೆ ಬೇಸತ್ತು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಸುಳ್ಳು ತೆರಿಗೆ ಹಾಕಿ, ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಈ ಹಿಂದೆ ತೆರಿಗೆ ಇಲಾಖೆಯು ಮಾರಾಟಕ್ಕೆ ಸಂಬಂಧಿಸಿದಂತೆ 2012-13 ಹಾಗೂ 2013-14ನೇ ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮಾರಾಟಾ ತೆರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದರು. ಇದನ್ನು ಪ್ರಶ್ನೆ ಮಾಡಿ ನಟಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಅನುಷ್ಕಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಲ್ಗೊಂಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರೂ, ಮಾರಾಟ ತೆರಿಗೆಯನ್ನು ಪಾವತಿಸಿಲ್ಲ. ಹಾಗಾಗಿ ಕೂಡಲೇ ಪಾವತಿಸಬೇಕು ಎಂದು ಮಾರಾಟ ತೆರಿಗೆ ಆಯುಕ್ತರು ಸೂಚಿಸಿದ್ದರು.
ಈ ನೋಟಿಸ್ ಅನ್ನು ಕೈ ಬಿಡಬೇಕು ಎಂದು ಕೋರ್ಟ್ ಗೆ ಅನುಷ್ಕಾ ಮನವಿ ಮಾಡಿದ್ದಾರೆ. ಈ ಕುರಿತು ಮಾರಾಟ ತೆರಿಗೆ ಇಲಾಖೆಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.