Publish Date: Fri, 28 Jun 2024 (09:45 IST)
Updated Date: Fri, 28 Jun 2024 (09:50 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪರವಾಗಿ ತೆಲುಗು ನಟ ನಾಗ ಶೌರ್ಯ ಮಾತನಾಡಿದ್ದಾರೆ. ದರ್ಶನ್ ಅಣ್ಣ ಯಾರಿಗೂ ತೊಂದರೆ ಕೊಡುವವರಲ್ಲ ಎಂದಿದ್ದಾರೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಇದೀಗ ದರ್ಶನ್ ಮತ್ತು ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ಕನ್ನಡ ಚಿತ್ರರಂಗದ ಕೆಲವೇ ಕೆಲವು ಕಲಾವಿದರನ್ನು ಬಿಟ್ಟರೆ ಉಳಿದವರು ಯಾರೂ ದರ್ಶನ್ ಪರವಾಗಿ ಮಾತನಾಡಿಲ್ಲ. ಆದರೆ ಇದೀಗ ತೆಲುಗು ನಟ ನಾಗ ಶೌರ್ಯ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿ ಸಾವಿಗೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬದ ಬಗ್ಗೆ ಕೇಳಿದಾಗ ತೀವ್ರ ದುಃಖವಾಗುತ್ತದೆ ಮತ್ತು ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಆದರೆ ಜನ ಕೋರ್ಟ್ ತೀರ್ಪು ಬರುವ ಮೊದಲೇ ದರ್ಶನ್ ಬಗ್ಗೆ ತೀರ್ಪು ನೀಡುತ್ತಿರುವುದು ವಿಷಾಧನೀಯ. ದರ್ಶನ್ ಅಣ್ಣ ತಮ್ಮ ಕನಸಿನಲ್ಲೂ ಇನ್ನೊಬ್ಬರಿಗೆ ಕೇಡು ಮಾಡುವವರಲ್ಲ. ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಎಂಥಾ ವ್ಯಕ್ತಿ ಎಂದು ಗೊತ್ತಿರುತ್ತದೆ. ನಾನು ಈ ಸುದ್ದಿಯನ್ನು ನಂಬಲು ಸಾಧ್ಯವಿಲ್ಲ. ನ್ಯಾಯದ ಬಗ್ಗೆ ನನಗೆ ವಿಶ್ವಾಸವಿದೆ ಎಂದು ನಾಗ ಶೌರ್ಯ ಹೇಳಿದ್ದಾರೆ.